ಬೆಂಗಳೂರು, ನ 10(SM): ಆಂಬಿಡೆಂಟ್ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳಿಂದ ತಲೆ ಮರೆಸಿಕೊಂಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಇದೀಗ ವಿಚಾರಣೆಗೆಂದು ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ.
ಮಾಜಿ ಸಚಿವರ ವಿಚಾರಣೆಯನ್ನು ಎಸಿಪಿ ವೆಂಕಟೇಶ್ ಪ್ರಸನ್ನ ಆರಂಭಿಸಿದ್ದಾರೆ. ಮೊದಲು ಜನಾರ್ದನ ರೆಡ್ಡಿ ಇವರೇ ಎನ್ನುವುದಕ್ಕೆ ಐಡಿ ಕಾರ್ಡ್, ಫೋಟೊ ಹಾಗೂ ಸಹಿಯನ್ನು ಪಡೆದಿದ್ದು, ಇದೀಗ ಅವರ ಹೇಳಿಕೆಯ ವಿಡಿಯೋ ಹಾಗೂ ಬರವಣಿಗೆಯಲ್ಲಿ ದಾಖಲು ಮಾಡುತ್ತಿದ್ದಾರೆ.
ಹೇಳಿಕೆಯನ್ನು ದಾಖಲಿಸಲು ಸಿಸಿಬಿಯಿಂದ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ. ಯಾವ ಪ್ರಶ್ನೆಗಳನ್ನು ಕೇಳಬೇಕೆಂದು ಸಿಸಿಬಿ ಸಿದ್ಧತೆ ಮಾಡಿಕೊಂಡಿದೆ. ಶನಿವಾರ ನಮ್ಮ ವಕೀಲರ ಮೂಲಕ ನೋಟಿಸ್ ಕೊಟ್ಟು ಭಾನುವಾರ ಹಾಜರಾಗಲು ಸೂಚಿಸಿದ್ದರು.
ಆದರೆ, ಶನಿವಾರವೇ ಜನಾರ್ದನಾ ರೆಡ್ಡಿ ಬಂದಿದ್ದಾರೆ. ‘ನನಗೆ ಬಂಧನದ ಭಯ ಇಲ್ಲ, ಬೇಕಾದರೆ ಬಂಧಿಸಲಿ, ನೋಟಿಸ್ ಕೊಡದೆ ತಾನಾಗಿಯೇ ಯಾಕೆ ಪೊಲೀಸರ ಬಳಿ ಬರಲಿ, ನಾನು ತಲೆಮರೆಸಿಕೊಂಡಿರಲಿಲ್ಲ’ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ರೆಡ್ಡಿ ಜತೆಗೆ ಅವರ ಆಪ್ತ ಎನಿಸಿಕೊಂಡಿರುವ ಅಲಿಖಾನ್ ಕೂಡ ಹಾಜರಾಗಿದ್ದಾರೆ. ಇದೀಗ ಸಿಸಿಬಿ ಮುಖ್ಯಸ್ಥ ಅಲೋಕ್ ಕುಮಾರ್ ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ. ಇನ್ನು ಸಿಸಿಬಿ ಕಚೇರಿ ಬಳಿ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.