ಮಂಗಳೂರು, ಅ 04 (DaijiworldNews/MS): ನಗರದ ಮರೋಳಿಯಲ್ಲಿ ಅಕ್ಟೋಬರ್ 3 ರ ಭಾನುವಾರ ಸಂಜೆ ಚಿರತೆಯೊಂದು ಕಂಡು ಬಂದಿದೆ ಎನ್ನಲಾಗಿದ್ದು, ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸಂಜೆ ವೇಳೆ ಮರೋಳಿಯಲ್ಲಿ ಮಕ್ಕಳು ಆಟ ಆಡುತ್ತಿದ್ದಾಗ ಚಿರತೆಯನ್ನು ಹೋಲುವ ಪ್ರಾಣಿಯೊಂದನ್ನು ದೂರದಿಂದ ನೋಡಿದ್ದಾರೆ. ಆ ವೇಳೆ ಕತ್ತಲಾಗುತ್ತ ಬಂದಿದ್ದರಿಂದ ಅಸ್ಪಷ್ಟವಾಗಿ ಗೋಚರವಾಗಿತ್ತು. ಮೊಬೈಲ್ ಫೋನಿನಲ್ಲಿ ಜನರು ಫೋಟೋ ತೆಗೆದಿದ್ದು, ಫೋಟೋದಲ್ಲಿ ಸ್ಪಷ್ಟತೆ ಇಲ್ಲ. ಈ ಪ್ರದೇಶದಲ್ಲಿ ಈ ಹಿಂದೆ ಕೆಲವು ಬೀದಿ ನಾಯಿಗಳು ಇದ್ದು ಅವು ಇತ್ತೀಚೆಗೆ ಕಾಣಿಸುತ್ತಿಲ್ಲ. ಹೀಗಾಗಿ ನಾಯಿಗಳ ಬೇಟೆಗಾಗಿಯೇ ಬಂದಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಸೋಮವಾರ ಬೆಳಗ್ಗೆ ಪುನಃ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತಿದ್ದಾರೆ. "ಅದು ಚಿರತೆಯೇ ಇರಬಹುದು ಅಥವಾ ಪಚನಾಡಿ ಪ್ರದೇಶದ ಸುತ್ತಲೂ ಅನೇಕ ಹೈನಾಗಳು ಇರುವುದರಿಂದ ಅದು ಹೈನಾ ಆಗಿರುವ ಸಂಭವನೀಯತೆ ಹೆಚ್ಚು. ಹೈನಾ ಪಚ್ಚನಾಡಿಯಿಂದ ಮರೋಲಿಗೆ ದಾರಿ ತಪ್ಪಿರುವ ಸಾಧ್ಯತೆಗಳಿವೆ" ಎಂದು ಮಂಗಳೂರು ವಲಯ ಅರಣ್ಯ ಅಧಿಕಾರಿ ಪ್ರಶಾಂತ್ ಪೈ ಅವರು ಅಭಿಪ್ರಾಯಪಟ್ಟಿದ್ದಾರೆ.