ಮಂಗಳೂರು, ನ10(SS): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
ನಗರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಸರಕಾರದ ನಿರ್ದೇಶನದಂತೆ ಇಂದು ಮಂಗಳೂರಿನ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಆಚರಿಸಲಾಗುತ್ತಿದೆ. ಆದರೆ ಟಿಪ್ಪು ಜಯಂತಿ ಆಚರಣೆಗೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ
ಜಿಲ್ಲೆಯಲ್ಲಿ ನಿಷೇದಾಜ್ಞೆ ಅವಧಿಯಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ, ಮುಷ್ಕರಗಳನ್ನು ನಡೆಸುವಂತಿಲ್ಲ. ಯಾವುದೇ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಂತಿಲ್ಲ. ಯಾವುದೇ ರೀತಿಯ ಪ್ರಚಾರಗಳನ್ನು, ಭಿತ್ತಿ ಪತ್ರ ಹಂಚುವ ಮೂಲಕ ವಾಹನದಲ್ಲಿ ಪ್ರಚಾರ, ಘೋಷಣೆ, ಭಾಷಣ ಮಾಡುವಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ. ಸರಕಾರದಿಂದ ಆಯೋಜಿಸಿದ ಕಾರ್ಯಕ್ರಮಗಳು, ಮದುವೆ, ಮುಂಜಿ, ಶವ ಸಂಸ್ಕಾರ, ಸಂತೆ, ಜಾತ್ರೆ ಕಾರ್ಯಕ್ರಮಗಳಿಗೆ ನಿಷೇಧಾಜ್ಞೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಾನೂನು, ಶಾಂತಿ ಸುವ್ಯಸ್ಥೆ ಕಾಪಾಡುವ ಉದ್ದೇಶದಿಂದ ನವೆಂಬರ್ 9ರ ಸಂಜೆ 6 ಗಂಟೆಯಿಂದ ನವೆಂಬರ್ 10 ಮದ್ಯರಾತ್ರಿ 12 ಗಂಟೆವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿ ಮಾಡಿ, ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.