ಉಡುಪಿ, ನ 09(SM): ಪ್ರಧಾನಿ ನರೇಂದ್ರ ಮೋದಿ ಅವರು ನೋಟು ಅಮಾನ್ಯಮಾಡಿದ ಬಳಿಕ ಜನಸಾಮಾನ್ಯರಿಗೆ ಜೀವನ ನಡೆಸಲು ಕಷ್ಟವಾಗಿದೆ. ದೇಶದ ಆರ್ಥಿಕ ಅಭಿವೃದ್ಧಿ ದರ ಕುಸಿದಿದೆ. ದೇಶದ ಬೆನ್ನೆಲುಬಾಗಿದ್ದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಚೇತರಿಸಿಕೊಂಡಿಲ್ಲ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ 2 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಶುಕ್ರವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನೋಟು ಅಮಾನ್ಯದಿಂದ ಉದ್ಯೋಗ ಸೃಷ್ಟಿಯ ಮೇಲೆಯೂ ನಕಾರಾತ್ಮಕ ಪ್ರಭಾವ ಬೀರಿದೆ. ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಸಾಲದ ಬಿಕ್ಕಟ್ಟಿನಲ್ಲಿ ಸಿಲುಕಿವೆ. ಆರ್ಥಿಕ ನೀತಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ದುಸ್ಸಾಹಸಕ್ಕೆ ಕೈ ಹಾಕಿದ ಪರಿಣಾಮ ದೇಶ ಸಂಕಷ್ಟಕ್ಕೀಡಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೋಟು ನಿಷೇಧದಿಂದ ದೇಶದಾದ್ಯಂತ ನೂರಾರು ಜನರು ಹಣಕ್ಕಾಗಿ ದಿನವಿಡೀ ಎಟಿಎಂ, ಬ್ಯಾಂಕ್ ಮುಂದೆ ನಿಲ್ಲಬೇಕಾಯಿತು. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಜನ ಸಾಮಾನ್ಯರು ಸಂಕಷ್ಟ ಅನುಭವಿಸುವಂತಾಯಿತು ಎಂದರು.