ಬಂಟ್ವಾಳ, ಸೆ. 30 (DaijiworldNews/SM): ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿದ ಯುವಕನೋರ್ವ ಬಳಿಕ ಆಕೆಗೆ ಜೀವಬೆದರಿಕೆ ಒಡ್ಡಿ ಲೈಂಗಿಕ ದೌರ್ಜನ್ಯ ವೆಸಗಿರುವ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಲ ಗ್ರಾಮದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಬಂಗೇರಕಟ್ಟೆ ನಿವಾಸಿ ನವಾಜ್ ಎಂಬಾತ ಈ ಕೃತ್ಯ ವೆಸಗಿದ್ದು,ಬಾಲಕಿಯ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿ ನವಾಜ್ ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಳೆದ ಮೂರು ವರ್ಷದ ಹಿಂದೆ ಬಾಲಕಿಯನ್ನು ಪರಿಚಯಿಸಿಕೊಂಡು ಆಕೆಯ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿಕೊಂಡು ಆಗಾಗ ಬಂದು ಬಾಲಕಿಗೆ ಜೀವಬೆದರಿಕೆ ಒಡ್ಡಿ ಲೈಂಗಿಕ ದೌರ್ಜನ್ಯ ವೆಸಗುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈತನ ಕೃತ್ಯದಿಂದ ನೊಂದ ಬಾಲಕಿ ಮನೆಮಂದಿಗೆ ವಿಷಯ ತಿಳಿಸಿದ್ದು, ಇದೀಗ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಈ ಕೃತ್ಯದಿಂದ ಭಯ ಬೀತಳಾಗಿರುವ ಅಪ್ರಾಪ್ತೆ ಬಾಲಕಿ ಹಾಗೂ ಮನೆಯವರಿಗೆ ಸ್ಥಳೀಯ ವಿಶ್ವಹಿಂದುಪರಿಷದ್ ಬಜರಂಗದಳ ಮತ್ತು ಬಿ.ಜೆ.ಪಿ ನಾಯಕರು ಧೈರ್ಯ ತುಂಬಿದ್ದಾರೆ.