ಬೆಂಗಳೂರು, ನ 09 (MSP): ನಟ ದುನಿಯಾ ವಿಜಯ್ ಮನೆಗೆ ಹೋಗದಂತೆ ಮೊದಲ ಪತ್ನಿ ನಾಗರತ್ನಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಮಧ್ಯಂತರ ಆದೇಶ ನೀಡಿ ನಿರ್ಬಂಧ ಹೇರಿದೆ. ಕೌಟುಂಬಿಕ ಕಲಹ ತೀವ್ರಗೊಂಡ ಹಿನ್ನಲೆಯಲ್ಲಿ ಹಾಗೂ 2 ನೇ ಪತ್ನಿ ಕೀರ್ತಿಗೌಡ ಮೇಲೆ ನಾಗರತ್ನ ಹಲ್ಲೆ ನಡೆಸಿದ ನಂತರ ವಿಚ್ಛೇದನ ಕೋರಿ ವಿಜಯ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ನಾಗರತ್ನ ಅವರು ವಿಜಯ್ ಮನೆಗೆ ತೆರಳದಂತೆ ನಿರ್ಬಂಧ ಹೇರಿದೆ. ದುನಿಯಾ ವಿಜಯ್ ವಿರುದ್ಧ ಮಾಧ್ಯಮಗಳಿಗೆ ಸಂದರ್ಶನ ಅಥವಾ ಹೇಳಿಕೆ ನೀಡಬಾರದು, ನಟ ವಿಜಯ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವಂತಿಲ್ಲ. ಪ್ರಕರಣದ ವಿಚಾರಣೆಯ ವೇಳೆ ಕ್ಯಾಮೆರಾ ಬಳಸುವಂತೆಯೂ ಸೂಚನೆ ನೀಡಲಾಗಿದೆ.
ಕೋರ್ಟ್ ಅದೇಶವನ್ನು ಸ್ವಾಗತಿಸಿರುವ ದುನಿಯಾ ವಿಜಯ್ ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ನನ್ನ ಹೆಸರು ಹಾಳು ಮಾಡಲು ಯತ್ನಿಸಿದ್ದು ನನಗೆ ನೋವು ಬೇಸರ ತಂದಿತ್ತು. ಕೋರ್ಟ್ ಆದೇಶ ನನಗೆ ತೃಪ್ತಿ ತಂದಿದೆ ಎಂದರು.