ಮಂಗಳೂರು, ಸೆ 30 (DaijiworldNews/MS): ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ, ಸಂಗ್ರಹಿಸಿ, ವೈಜ್ಞಾನಿಕವಾಗಿ ಸೂಕ್ತ ರೀತಿಯಲ್ಲಿ ವಿಲೇ ಮಾಡುವುದು ಸದ್ಯದ ಅನಿವಾರ್ಯತೆಯಾಗಿದೆ.
ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯಾಗದೇ ಇದ್ದರೂ ಕಸ ವಿಲೇವಾರಿಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಹಸಿ ಕಸವನ್ನು ಮನೆಯ ಹಂತದಲ್ಲಿಯೇ ಪೈಪ್ ಕಾಂಪೋಸ್ಟ್ ಮೂಲಕ ವಿಲೆಗೊಳಿಸುವ ಹಾಗೂ ಘನ ತ್ಯಾಜ್ಯವನ್ನು ಗ್ರಾಮ ಪಂಚಾಯ್ತಿಯಿಂದ ಸಂಗ್ರಹಿಸಿ ತಾತ್ಕಾಲಿಕವಾಗಿ ಗುರುತಿಸಿರುವ ಶೆಡ್ ನಲ್ಲಿ ಶೇಖರಿಸಿ ಇಡಲಾಗುತ್ತಿದೆ. ಆರಂಭದಲ್ಲಿ ಸ್ವಲ್ಪ ಕಷ್ಟವೆನಿಸಿದರೂ ಕೂಡ ನಿಧಾನವಾಗಿ ಸಾರ್ವಜನಿಕರು ಗ್ರಾಮ ಪಂಚಾಯ್ತಿಯ ಕಾಳಜಿಯನ್ನು ಅರ್ಥ ಮಾಡಿಕೊಂಡು ಗ್ರಾಮ ಪಂಚಾಯ್ತಿಯೊಂದಿಗೆ ಕೈ ಜೋಡಿಸಿ, ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಒಣ ಕಸವನ್ನು ಗ್ರಾಮ ಪಂಚಾಯಿತಿಯಿಂದ ಮನೆ ಮನೆಗೆ ತೆರಳುವ ಕಸ ಸಂಗ್ರಹಣೆ ವಾಹನಕ್ಕೆ ನೀಡುತ್ತಿರುವುದು ಖುಷಿಯ ವಿಚಾರ. ಹಸಿ ಮತ್ತು ಒಣ ಕಸಕ್ಕೊಂದು ದಾರಿ ಹುಡುಕಿದ ಮೇಲೆ ಸವಾಲಾಗಿ ನಿಂತಿದ್ದು ಮಹಿಳೆಯರು ಬಳಸಿ ಎಲ್ಲೆಂದರಲ್ಲಿ ಬೀಸಾಡುತ್ತಿದ್ದ ಸ್ಯಾನಿಟರಿ ನ್ಯಾಪ್ ಕಿನ್ ಗಳು. ಸರ್ಕಾರದ ನಿರ್ದೇಶನದಂತೆ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ವಿಲೆಗೊಳಿಸಲು ಈಗಾಗಲೇ ಇನ್ಸಿನರೇಟರ್ ಯಂತ್ರವನ್ನು ಖರೀದಿಸಲಾಗಿದ್ದು ಈಗ ನ್ಯಾಪ್ ಕಿನ್ ಗಳನ್ನು ಸಂಗ್ರಹಿಸುವ ಸಲುವಾಗಿ ಋತು ಎಂಬ ಶೀರ್ಷಿಕೆಯಡಿ ಪಿಂಕ್ ಬಾಕ್ಸ್ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ.
ಏನಿದು ಪಿಂಕ್ ಬಾಕ್ಸ್..?
ಗ್ರಾಮ ಪಂಚಾಯ್ತಿ ಕಚೇರಿಯು ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ಪ್ರತಿಯೊಂದು ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೊಂದರಂತೆ ಗುಲಾಬಿ ಬಣ್ಣದ ಡಸ್ಟ್ ಬಿನ್ ಗಳನ್ನು ಮಕ್ಕಳ ಕೈಗೆ ಸಿಗದಷ್ಟು ಎತ್ತರದಲ್ಲಿರುವಂತೆ ಕೇವಲ ಮಹಿಳೆಯರು ಪ್ರವೇಶಿಸುವಂತಹ ಸ್ಥಳಗಳಲ್ಲಿ ಅಳವಡಿಸಲಾಗುವುದು. ವಿದ್ಯಾರ್ಥಿನಿಯರು ಹಾಗೂ ಗ್ರಾಮದ ಮಹಿಳೆಯರು ತಾವು ಬಳಸಿದ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಪೇಪರ್ ನಲ್ಲಿ ಸುತ್ತಿ ತಂದು ಆ ಗುಲಾಬಿ ಬಾಕ್ಸ್ ನಲ್ಲಿ ತಂದು ಹಾಕುತ್ತಾರೆ. ದಿನಕ್ಕೊಮ್ಮೆ ಪ್ರತಿ ಕೇಂದ್ರಕ್ಕೂ ಭೇಟಿನೀಡುವ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಸೂಕ್ತ ಮುಂಜಾಗ್ರತೆಯೊಂದಿಗೆ ಸಂಗ್ರಹಿಸಿ ಈಗಾಗಲೇ ಅಳವಡಿಸಿರುವ ಇನ್ಸಿನರೇಟರ್ ಯಂತ್ರದ ಮೂಲಕ ವಿಲೇವಾರಿ ಮಾಡುತ್ತಾರೆ.
ಇನ್ಸಿನರೇಟರ್ ಯಂತ್ರ
ಸುಮಾರು 900° ಸೆಲ್ಸಿಯಸ್ ಉಷ್ಣಾಂಶದಲ್ಲಿ ಉರಿಯುವ ಈ ಆಧುನಿಕ ಯಂತ್ರವು ಏಕ ಕಾಲಕ್ಕೆ 50 ರಿಂದ 60 ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು 20 ನಿಮಿಷಗಳಲ್ಲಿ ಸುಟ್ಟು ಬೂದಿ ಮಾಡುತ್ತದೆ. ಅಷ್ಟು ಪ್ರಮಾಣದ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಸುಡುವಾಗಲೂ ಅದರಿಂದ ಹೊರಬರುವ ಅಲ್ಪ ಪ್ರಮಾಣದ ಹೊಗೆಯು ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟು ಮಾಡಲಾರದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಮತ್ತು ಏಕ ಕಾಲಕ್ಕೆ 60 ಪ್ಯಾಡ್ ಗಳನ್ನು ದಹಿಸಿದಾಗಲೂ ಕೇವಲ ಗರಿಷ್ಟ 1% ನಷ್ಟು ಮಾತ್ರ ಬೂದಿ ಉಳಿಯುತ್ತದೆ ಅದನ್ನು ಟಾಯ್ಲೆಟ್ ಗೆ ಹಾಕಿಬಿಡಬಹುದು. ಇದುವರೆಗೂ ಸ್ವಸ್ಥ ಸಮಾಜಕ್ಕೊಂದು ಸವಾಲಾಗಿದ್ದ,ಬಳಸಿ ಅಲ್ಲಲ್ಲಿ ಬೀಸಾಡುತ್ತಿದ್ದ ಸ್ಯಾನಿಟರಿ ನ್ಯಾಪ್ ಕಿನ್ ಗಳಿಂದ ಪರಿಸರಕ್ಕೆ ಹಾಗೂ ಮನುಕುಲಕ್ಕೆ ಉಂಟಾಗಬಹುದಾದ ಹಾನಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತದೆ.
ಕಾರಣ ಕಿಲ್ಪಾಡಿ ಗ್ರಾ.ಪಂ ನ ಸಾರ್ವಜನಿಕರು ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿಯೊಂದಿಗೆ ಕೈ ಜೋಡಿಸಿ ನಮ್ಮ ಗ್ರಾಮವನ್ನು ಸ್ವಸ್ಥ ಮತ್ತು ಸುಂದರ ಗ್ರಾಮವನ್ನಾಗಿಸಲು ಸಹಕರಿಸಬೇಕೆಂದು ಈ ಮೂಲಕ ವಿನಂತಿಸಿದೆ.