ಕಾಸರಗೋಡು, ಸೆ.28 (DaijiworldNews/HR): ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು ಸಮೀಪ ಚಿನ್ನಾಭರಣ ವ್ಯಾಪಾರಿಯನ್ನು ಅಪಹರಿಸಿ 65 ಲಕ್ಷ ರೂ. ದರೋಡೆಗೈದ ಘಟನೆಯೊಂದು ಇತ್ತೀಚಿಗೆ ನಡೆದಿದ್ದು, ದರೋಡೆಕೋರರದ್ದೆಂದು ಸಂಶಯಿಸಲಾದ ಸಿಸಿಟಿವಿ ದೃಶ್ಯಗಳನ್ನು ಕಾಸರಗೋಡು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ತಂಡದಲ್ಲಿ ಐದರಿಂದ ಏಳು ಮಂದಿ ದರೋಡೆಕೋರರಿದ್ದು, ಕಣ್ಣೂರು, ಕಾಸರಗೋಡು ಜಿಲ್ಲೆಯ ಹಲವೆಡೆಗಳಿಂದ ಸಿಸಿಟಿವಿ ದ್ರಶ್ಯಗಳನ್ನು ಕಲೆ ಹಾಕಲಾಗಿದೆ. ಮೂರು ವಾಹನಗಳಲ್ಲಿ ಬಂದು ಕೃತ್ಯ ನಡೆಸಲಾಗಿದೆ.
ಮೊಗ್ರಾಲ್ ಪುತ್ತೂರಿನಲ್ಲಿ ಮಹಾರಾಷ್ಟ್ರ ಸಾಂಗ್ಲಿಯ ರಾಹುಲ್ ಮಹಾದೇವ್ ಜಾಬರ್ ಎಂಬವರನ್ನು ಅಪಹರಿಸಿ 65 ಲಕ್ಷ ರೂ. ದರೋಡೆ ಮಾಡಿದ್ದರು. ಈ ದರೋಡೆ ಕೋರರ ದೃಶ್ಯಗಳು ಪಯ್ಯನ್ನೂರುನಿಂದ ಲಭಿಸಿದ್ದು, ಇದೇ ತಂಡ ಕೃತ್ಯದಲ್ಲಿ ಶಾಮೀಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ದರೋಡೆಕೋರರು ವಾಹನಗಳಿಗೆ ಬಳಸಿದ್ದ ನಂಬರ್ ಪ್ಲೇಟ್ ನಕಲಿ ಎಂದು ಪತ್ತೆಹಚ್ಚಲಾಗಿತ್ತು.