ಸುಳ್ಯ, ನ 08(SM): ಕಳೆದ ವರ್ಷಕ್ಕೆ ಹೋಲಿಸಿದರೆ ಸುಳ್ಯ ತಾಲೂಕಿನಲ್ಲಿ ಹೊಳೆ ತೋಡಿನಲ್ಲಿ ನೀರಿನ ಪ್ರಮಾಣ ಈ ವರ್ಷ ಗಣನೀಯವಾಗಿ ಕುಸಿತಗೊಂಡಿದೆ. ಬೇಸಿಗೆಯಲ್ಲಿ ರೈತರಿಗೆ ನೀರಿಗೆ ಬರ ಎದುರಾಗುವ ಆತಂಕ ಕಾಡುತ್ತಿದ್ದು ಈ ಹಿನ್ನಲೆಯಲ್ಲಿ ಕಿಂಡಿ ಅಣೆಕಟ್ಟು, ಸಾಂಪ್ರದಾಯಿಕ ಕಟ್ಟದ ಮೂಲಕ ಜನರು ನೀರು ಸಂಗ್ರಹಿಸಲು ಮುಂದಾಗಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ ತಿಂಗಳಿನ ಕೊನೆಯಲ್ಲಿ ಕಿಂಡಿ ಅಣೆಕಟ್ಟು,ಇತರೆ ಸಾಂಪ್ರದಾಯಿಕ ಅಣೆಕಟ್ಟಿನ ಮೂಲಕ ರೈತರು ನೀರು ಸಂಗ್ರಹಸಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಈ ವರ್ಷ ಒಂದುವರೆ ತಿಂಗಳಿಗೆ ಮೊದಲೆ ನೀರು ಸಂಗ್ರಹಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಅರಂತೋಡು ಗ್ರಾಮದ ಅಂಗಡಿಮಜಲಿನಲ್ಲಿ ನೂತನವಾಗಿ ನಿರ್ಮಿಸಿದ ಕಿರು ಕಿಂಡಿ ಅಣೆಕಟ್ಟಿನಲ್ಲಿ ಈಗ ನೀರು ಸಂಗ್ರಹಿಸಲಾಗಿದೆ.
ಈ ಕಿಂಡಿ ಅಣೆಕಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದು ಈ ಭಾಗದ ರೈತ ಪಲಾನುಭವಿಗಳ ಮುಖದಲ್ಲಿ ಮಂದಹಾಸ ಬೀರಿದೆ. ಇಲ್ಲಿ ಸುಮಾರು 8 ರೈತ ಕುಟುಂಬಗಳು ಇದರ ಪ್ರಯೋಜನ ಪಡೆಯಲಿದ್ದಾರೆ.
2017-2018ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್ನ ಪ್ರೋತ್ಸಾಹದಿಂದ ಅರಂತೋಡು ಗ್ರಾಮ ಪಂಚಾಯತ್ನ ವತಿಯಿಂದ ಉದ್ಯೋಗ ಖಾತರಿ ಯೋಜನೆಯಲ್ಲಿ ಕೃಷಿಗೆ ನೀರು ಒದಗಿಸುವ ದೃಷ್ಠಿಯಿಂದ ಹಾಗೂ ಅಂತರ್ಜಲ ಮಟ್ಟ ಏರಿಕೆಗೆ ಉದ್ದೇಶ ಇರಿಸಿಕೊಂಡು ಮೂರು ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಅಂಗಡಿಮಜಲಿನಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟು ಒಂದಾಗಿದೆ. ಇನ್ನೆರಡನ್ನು ತೊಡಿಕಾನ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ.