ಉಡುಪಿ, ಸೆ.27 (DaijiworldNews/HR): ಪ್ರವಾಸೋದ್ಯಮ ಇಲಾಖೆ ಉಡುಪಿ, ಮಲ್ಪೆ ಅಭಿವೃದ್ಧಿ ಸಮಿತಿ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಇಂದು ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ, ರಜತಾದ್ರಿ, ಮಣಿಪಾಲದಲ್ಲಿ "ವಿಶ್ವ ಪ್ರವಾಸೋದ್ಯಮ ದಿನಾಚರಣೆ 2021-22" ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, "ಕಳೆದ 2 ವರ್ಷಗಳಿಂದ ಪ್ರವಾಸೋದ್ಯಮ ಕ್ಷೇತ್ರ ನಷ್ಟ ಅನುಭವಿಸಿದೆ. ಈಗೀಗ ದೇಶಿಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತನ್ನು ಪ್ರವಾಸಿಗರು ನೀಡುತಿದ್ದಾರೆ. ಉಡುಪಿಯಲ್ಲಿ ಬೀಚ್ ಟೂರಿಸಂ, ಟೆಂಪಲ್ ಟೂರಿಸಂ ಮತ್ತು ಹೆಲ್ತ್ ಟೂರಿಸಂ ನಲ್ಲಿ ವಿಫುಲ ಅವಕಾಶ ಇದೆ. ನಮ್ಮಲ್ಲಿಗೆ ಬರುವಂತಹ ಪ್ರವಾಸಿಗರಿಗೆ ಉತ್ತಮ ವ್ಯವಸ್ಥೆಯ ಜೊತೆಗೆ ಅವರಿಗೆ ಉತ್ತಮ ಅನುಭವವನ್ನು ನೀಡಬೇಕಾದ ತಯಾರಿಗಳನ್ನು ನಾವು ಮಾಡಬೇಕಾಗಿದೆ. ರಾಜ್ಯ ಸರಕಾರ ಈಗಾಗಲೇ ಟೂರಿಸಂ ನೀತಿಯನ್ನು ಜಾರಿಗೆ ತಂದಿದೆ. ನಮ್ಮ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳೆಂದು ಗುರುತಿಸಲ್ಪಟ್ಟ ಇರದ ಹಲವಾರು ತಾಣಗಳು ಇವೆ. ಇವುಗಳನ್ನು ನಾವು ಮುನ್ನೆಲೆಗೆ ತರಬೇಕಾಗಿದೆ. ನಮ್ಮ ಜಿಲ್ಲೆಯ ಜನರು ತಮ್ಮ ಮನಸ್ಥಿತಿಯನ್ನು ಬದಲಾಯಿಸಯವ ಸಾಮೂಹಿಕ ಪ್ರಯತ್ನಗಳು ಮಾಡಬೇಕು" ಎಂದರು.
ಇದೇ ಸಂಧರ್ಭದಲ್ಲಿ ಸುಮಾರು 100 ಕ್ಕೂ ಅಧಿಕ ಸ್ಥಳಗಳನ್ನು ಸಂದರ್ಶಿಸಿರುವ ಡಾ. ಕಿರಣ್ ಆಚಾರ್ಯ ಇವರಿಂದ ಪ್ರವಾಸ ಕಥನ ಉಪನ್ಯಾಸವು ಜರಗಿತು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಉಡುಪಿ ನಗರಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿಯ ಅಧ್ಯಕ್ಷರಾದ ಮನೋಹರ್ ಶೆಟ್ಟಿ, ಕೆ.ಎಂ.ಸಿ ಮಣಿಪಾಲದ ಮೂಳೆ ಚಿಕಿತ್ಸೆ ವಿಭಾಗದ ಉಪನ್ಯಾಸಕರು ಮುಖ್ಯಸ್ಥರಾದ ಕಿರಣ್ ಕೆ.ವಿ ಆಚಾರ್ಯ ಹಾಗೂ ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನವೀನ್ ಭಟ್ ವೈ, ಉಡುಪಿ ನಗರ ಸಭೆಯ ಪೌರಾಯುಕ್ತರಾದ ಉದಯ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಕ್ಲಿಫರ್ಡ್ ಲೋಬೋ ಮತ್ತು ಪ್ರಮುಖರು ಉಪಸ್ಥಿತರಿದ್ದರು.