ಕಡಬ, ಸೆ.27 (DaijiworldNews/HR): ಅಪ್ರಾಪ್ತೆ ಯುವತಿಯ ಮೇಲೆ ಕಡಬ ಠಾಣೆಯ ಪೋಲಿಸ್ ಸಿಬ್ಬಂದಿ ಅತ್ಯಾಚಾರವೆಸೆಗಿದ್ದಾನೆ ಎನ್ನುವ ಆರೋಪಕ್ಕೆ ಸಂತ್ರಸ್ತೆ ಯುವತಿಯ ತಂದೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ಕಡಬ ಪೊಲೀಸ್ ಠಾಣೆ
ಯುವತಿಯು ಎರಡು ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕಡಬ ಠಾಣೆಯ ಪೋಲಿಸ್ ಸಿಬ್ಬಂದಿ ಶಿವರಾಜ್ ಎಂಬಾತ ಯಾವುದೋ ದಾಖಲೆ, ಸಮನ್ಸ್ ನೀಡುವ ವಿಚಾರಕ್ಕೆ ಮನೆಗೆ ಬರುತ್ತಿದ್ದು ,ಪರಿಚಯವಾಗಿದ್ದ, ಪ್ರಕರಣ ಮುಗಿದಿದ್ದರೂ ಶಿವರಾಜ್ ಬೇರೆ ಬೇರೆ ನೆಪವೊಡ್ಡಿ ಮನೆಗೆ ಬರುತ್ತಿದ್ದು ಈ ವೇಳೆ ತಾನು ಮದುವೆಯಾಗುವುದಾಗಿ ಯುವತಿಗೆ ಒಪ್ಪಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ.
ಇನ್ನು ಯುವತಿ ಆರೋಗ್ಯದಲ್ಲಿ ಇತ್ತೀಚಿಗೆ ಏರುಪೇರು ಕಂಡು ಬಂದಿದ್ದು, ಈ ವೇಳೆ ಯುವತಿ ನನಗೆ ಐದೂವರೆ ತಿಂಗಳು ಆಗಿದೆ ಎಂದು ಸತ್ಯ ಬಾಯಿಬಿಟ್ಟಿದ್ದಳು. ಸತ್ಯ ಹೊರ ಬಂದ ಬಳಿಕ ಶಿವರಾಜ್ ನಾನಾ ಕಾರಣ ಕೊಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸಂತ್ರಸ್ತೆಯ ತಂದೆ ಶಿವರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ.
ಪೋಲಿಸ್ ಪ್ರಭಾವ ಬಳಸಿ ನಮ್ಮನ್ನು ಬೆದರಿಸುತ್ತಿರುವ ಶಿವರಾಜ್ ವಿಚಾರಣೆ ನಡೆಸಿದಾಗ ಎಲ್ಲ ವಿಚಾರ ಬಹಿರಂಗವಾಗಲಿದೆ, ನನ್ನ ಮಗಳಿಗೆ ಆಗಿರುವ ಅನ್ಯಾಯಕ್ಕೆ ಸೂಕ್ತ ನ್ಯಾಯ ಕೊಡಿ ಎಂದು ವಿನಂತಿಸಿದ್ದಾರೆ.