ಛತ್ತೀಸ್ಗಡ್, ನ 08 (MSP): ನಕ್ಸಲರು ನಡೆಸಿದ ಬಾಂಬ್ ಸ್ಫೋಟದಿಂದ ಮೂವರು ನಾಗರೀಕರು ಮತ್ತು ಕೇಂದ್ರ ಕೈಗಾರಿಕ ಮೀಸಲು ಪಡೆಯ ಯೋಧರೊಬ್ಬರು ಸೇರಿದಂತೆ ನಾಲ್ಕು ಜನರು ಸಾವನ್ನಪ್ಪಿರುವ ಘಟನೆ ಛತ್ತೀಸ್ಗಡದ ದಾಂತೆವಾಡ ಜಿಲ್ಲೆಯಲ್ಲಿ ನಡೆದಿದೆ.
ಛತ್ತೀಸ್ಗಡದ ಚುನಾವಣೆಗೆ ಇನ್ನು ಕೇವಲ ನಾಲ್ಕು ದಿನ ಬಾಕಿ ಇರುವಂತೆ ದಂತೇವಾಡದ ಬಳಿ ಗುರುವಾರ ನಕ್ಸಲರು ಮತ್ತೆ ತಮ್ಮ ಅಟ್ಟಹಾಸ ಮೆರೆದಿದ್ದು, ಬಸ್ ಅನ್ನು ಗುರಿಯಾಗಿರಿಸಿಕೊಂಡು ಸುಧಾರಿತ ಸ್ಫೋಟಕ ಬಳಸಿ ಈ ದಾಳಿ ನಡೆಸಿದ್ದಾರೆ. ಪರಿಣಾಮ ಒಬ್ಬ ಯೋಧ, ಬಸ್ ಚಾಲಕ, ಕಂಡಕ್ಟರ್ ಹಾಗೂ ಕ್ಲೀನರ್ ಸಾವನ್ನಪ್ಪಿದ್ದಾರೆ.
ದಾಂತೇವಾಡ ಜಿಲ್ಲೆಯ ಗುಡ್ಡಗಾಡು ಪ್ರದೇಶವಾದ ಬಾಚೇಲಿಯ ರಸ್ತೆಯಲ್ಲಿ ಸುಧಾರಿತ ನೆಲಬಾಂಬ್ ಅನ್ನು ನಕ್ಸಲರು ಹುದುಗಿಸಿಟ್ಟಿದ್ದರು. ಬಸ್ ನಲ್ಲಿ ಯೋಧರು ಇರುವುದನ್ನು ಖಚಿತಪಡಿಸಿಕೊಂಡ ನಕ್ಸಲರು ಬಸ್ ಹಾದು ಹೋಗುವ ಸಮಯದಲ್ಲಿ ಬಾಂಬ್ ಸ್ಪೋಟಿಸಿದ್ದಾರೆ. ಈ ಬಸ್ ನಲ್ಲಿ ನಾಲ್ವರು ಸಿಐಎಸ್ ಎಫ್ ಯೋಧರು ಪ್ರಯಾಣಿಸುತ್ತಿದ್ದರು. ಇವರಲ್ಲಿ ಇಬ್ಬರು ಸಿಐಎಸ್ ಎಫ್ ಯೋಧರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಐಎಸ್ ಎಫ್ ಯೋಧರು ದಿನನಿತ್ಯದ ಅಡುಗೆ ಸಾಮಾನು ಖರೀದಿಸಿಕೊಂಡು ಬಸ್ ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ .ಸಿಐಎಸ್ ಎಫ್ ಯೋಧರು ದಿನನಿತ್ಯದ ಅಡುಗೆ ಸಾಮಾನು ಖರೀದಿಸಿಕೊಂಡು ಬಸ್ ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ನವೆಂಬರ್ 12 ಮತ್ತು 20ರಂದು ಒಟ್ಟು ಎರಡು ಹಂತದಲ್ಲಿ ಛತ್ತೀಸ್ ಗಢ್ ವಿಧಾನಸಭೆ ಚುನಾವಣೆ ನಡೆಯಲಿದ್ದು ಇದರ ನಿಮಿತ್ತ ಸಿಐಎಸ್ ಎಫ್ ಪಡೆಯ ಈ ಯೋಧರನ್ನು ಬಚೇಲಿ ಸಮೀಪದ ಹಳ್ಳಿಯೊಂದರಲ್ಲಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.