ಕಾಪು, ಸೆ.25 (DaijiworldNews/HR): ಬೆಳಪುವಿನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಕಾಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉದ್ಘಾಟನಾ ಸಮಾರಂಭಕ್ಕೆ ಅಧಿಕೃತ ಆಹ್ವಾನ ನೀಡದಿರುವುದಕ್ಕೆ ಮಾಜಿ ಸಚಿವ ವಿಜಯಕುಮಾರ್ ಸೊರಕೆ ಮತ್ತು ಬೆಳಪು ಗ್ರಾ.ಪಂ. ಮಾಜಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಲಾಲಾಜಿ ಆರ್. ಮೆಂಡನ್ ಹಾಗೂ ಇತರ ಗಣ್ಯರು ಕಾಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದು, ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯೊಂದಿಗೆ ಸ್ವಾಗತ ಕೋರಿದ್ದಾರೆ.
ಈ ವೇಳೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪಾಲಿಟೆಕ್ನಿಕ್ ಕಾಲೇಜು ಅನ್ನು ಮಂಜೂರುಗೊಳಿಸಲಾಗಿದ್ದು ಕಾಮಗಾರಿ ಪೂರ್ಣಗೊಂಡ ಬಳಿಕ ನಮ್ಮನ್ನು ಮರೆತಿರುವುದು ನೋವುಂಟು ಮಾಡಿದೆ" ಎಂದರು.
ಬೆಳಪು ಗ್ರಾ.ಪಂ. ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, "ಕಾಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಬರುವ ರಸ್ತೆಯನ್ನೂ ಸರಿಪಡಿಸಿಲ್ಲ. ಈ ಪರಿಸರದಲ್ಲಿರುವ ನೀರಿನ ಸಮಸ್ಯೆಯನ್ನೂ ಬಗೆಹರಿಸುವಲ್ಲಿ ಆಡಳಿತವು ವಿಫಲವಾಗಿದ್ದು, ಕಾಲೇಜಿಗೆ ಅಗತ್ಯವಾಗಿ ನಡೆಯಬೇಕಿರುವ ಮೂಲ ಸೌಕರ್ಯಗಳ ಜೋಡಣೆಯೂ ಆಗಿಲ್ಲ. ಇದನ್ನು ವಿರೋಧಿಸಿ ನಾವು ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿದ್ದೇವೆ" ಎಂದಿದ್ದಾರೆ.
ಈ ಸಂಧರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಂಗ್ರೆಸ್ ಮುಖಂಡರಾದ ಶಿವಾಜಿ ಸುವರ್ಣ ವೈ. ಸುಕುಮಾರ್, ಪ್ರಶಾಂತ್ ಜತ್ತನ್ನ, ನವೀನ್ ಎನ್. ಶೆಟ್ಟಿ, ರಮೀಝ್ ಪಡುಬಿದ್ರಿ, ಮೊದಲಾದವರು ಉಪಸ್ಥಿತರಿದ್ದರು.