ಮಂಗಳೂರು, ಸೆ.25 (DaijiworldNews/PY): "ಲಾಭದಾಯಕವಾಗಿ ನಡೆಯುತ್ತಿರುವ ನವಮಂಗಳೂರು ಬಂದರು ಟ್ರಸ್ಟ್ಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಪ್ರಪಂಚದಲ್ಲಿಯೇ ಉನ್ನತ ಬಂದರನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ" ಎಂದು ಕೇಂದ್ರದ ಬಂದರು, ಶಿಪ್ಪಿಂಗ್, ಜಲಸಾರಿಗೆ ಹಾಗೂ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಅವರು ತಿಳಿಸಿದರು.
ಅವರು ಸೆ.24ರ ಶುಕ್ರವಾರ ನವಮಂಗಳೂರು ಬಂದರು ಟ್ರಸ್ಟ್ ಬಳಿಯ ವಹಿವಾಟು ಅಭಿವೃದ್ದಿ ಕೇಂದ್ರ (ಬಿಡಿಸಿ)ವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
"ನವಮಂಗಳೂರು ಬಂದರು ಸ್ಥಾಪನೆಯಾದ ನಂತರ ಹಲವು ಮೈಲಿಗಲ್ಲನ್ನು ಸ್ಥಾಪಿಸಲಾಗಿದೆ. ಲಾಭದಾಯಕವಾಗಿಯೇ ನಡೆಯುತ್ತಿರುವ ಈ ಬಂದರಿನಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲು ಕೇಂದ್ರ ಸರಕಾರ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ, ಈ ನಿಟ್ಟಿನಲ್ಲಿ 2300 ಕೋಟಿ ರೂ.ಗಳ ವೆಚ್ಚದ ಗ್ಯಾಸ್ ಟರ್ಮಿನಲ್ ನಿರ್ಮಾಣಕ್ಕೆ ಚಿಂತಿಸಲಾಗಿದೆ" ಎಂದರು.
"ಸಾಗರಮಾಲಾ ಯೋಜನೆಯಡಿ ಬಂದರಿನ ಸಮಗ್ರ ಅಭಿವೃದ್ದಿಗೆ ಯೋಜನೆ ರೂಪಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಗುರುಪುರದ ಫಲ್ಗುಣಿ ನದಿ ಸಮುದ್ರ ಸೇರುವ ಸ್ಥಳದಲ್ಲಿ ಯೋಜನೆ ರೂಪಿಸಲಾಗುವುದು. ತುರ್ತು ಸಂದರ್ಭದಲ್ಲಿ ಮೀನುಗಾರಿಕೆ ಬೋಟುಗಳಿಗೆ ರಕ್ಷಣೆ ಒದಗಿಸುವುದರ ಸಹಿತ ಮೀನುಗಾರರ ಹಿತಾಸಕ್ತಿ ಕಾಪಾಡಲು ಅಗತ್ಯವಾದ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಹೇಳಿದರು.
"ಈ ಬಂದರಿನಿಂದ ರಫ್ತುದಾರರಿಗೆ ಈಗಾಗಲೇ ಸಾಕಷ್ಟು ಅನುಕೂಲವಾಗಿದೆ, ಅದರೊಂದಿಗೆ ದೇಶದ ಆರ್ಥಿಕ ಅಭಿವೃದ್ಧಿಗೂ ಸಹಕಾರ ಆಗಿದೆ, ದೇಶದ ಎಲ್ಲ ಬಂದರುಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಬದ್ಧವಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎನ್ಎಂಪಿಟಿಯಲ್ಲಿ ಕೈಗೊಳ್ಳಬೇಕಾದ ಹಲವು ಯೋಜನೆಗಳ ಕುರಿತು ಪ್ರಸ್ತಾವನೆಗಳನ್ನು ಸಲ್ಲಿಸಿದ್ದರು. ಅವುಗಳನ್ನು ಆದ್ಯತೆಯ ಮೇರೆಗೆ ಕಾರ್ಯಗತ ಮಾಡಲಾಗುವುದು" ಎಂದು ಹೇಳಿದರು.
"ಕುಳಾಯಿ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಅಡಚಣೆಗಳನ್ನು ನಿವಾರಿಸಿ ಶೀಘ್ರವೇ ಅದರ ಕಾಮಗಾರಿ ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು" ಎಂದರು.
"ಆಧುನಿಕ ಭಾರತದ ನಿರ್ಮಾಣದಲ್ಲಿ ಕರ್ನಾಟಕದ ಪಾತ್ರ ಅತಿ ಮಹತ್ವದ್ದಾಗಿದೆ. ಎಲ್ಲ ರಂಗಗಳಲ್ಲೂ ಮಹತ್ವದ ಕಾರ್ಯಗಳು ಕರ್ನಾಟಕದಿಂದ ಆಗುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವ ಗುರಿ ಹಾಕಿಕೊಂಡಿದ್ದಾರೆ. ಇದಕ್ಕೆ ದೇಶದ ಪ್ರತಿಯೊಬ್ಬರೂ ನಿಷ್ಠೆಯಿಂದ ಕೈಜೋಡಿಸುವ ಅಗತ್ಯವಿದೆ. ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರನ್ನು ಸ್ಮರಿಸುವ ಮೂಲಕ ದೇಶ ಭಕ್ತಿಯನ್ನು ಮೆರೆಯಬೇಕಾಗಿದೆ" ಎಂದರು.