ಬೆಂಗಳೂರು, ನ 08 (MSP):ಕೌಟುಂಬಿಕ ವಿಷಯವಾಗಿ ಪದೇ ಪದೇ ಗಲಾಟೆ ಮಾಡಿಕೊಂಡು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಡಿಸಿಪಿ ಎದುರು ಹಾಜರಾಗಲು ನೀಡಿದ್ದ ನೋಟೀಸ್ ನಂತೆ ನಟ ದುನಿಯಾ ವಿಜಯ್ ದಕ್ಷಿಣ ಭಾಗದ ಡಿಸಿಪಿ ಅಣ್ಣಾಮಲೈ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ವಿಚಾರಣೆ ಬಳಿಕ ನಟ ದುನಿಯಾ ವಿಜಯ್ ಅವರು ಸಾರ್ವಜನಿಕರ ಹಾಗೂ ಕಾನೂನಿನ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಕೌಟುಂಬಿಕ ಕಲಹದಿಂದ ಬೀದಿ ರಂಪಾಟದ ಹಿನ್ನೆಲೆಯಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 107ರ ಅಡಿ ಗಿರಿನಗರ ಪೊಲೀಸರು ದುನಿಯಾ ವಿಜಿ, ನಾಗರತ್ನ ಸೇರಿದಂತೆ 7 ಮಂದಿಯ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ್ದರು.
ಬುಧವಾರ ವಿಚಾರಣೆ ಹಾಜರಾಗಿದ್ದ ವಿಜಯ್ ಹಾಗೂ ಎರಡನೇ ಪತ್ನಿ ಕೀರ್ತಿಗೌಡ, ಪುತ್ರ, ತಂದೆ ಮತ್ತು ತಾಯಿ ಅವರ ಹೇಳಿಕೆಗಳನ್ನೂ ದಾಖಲಿಸಿಕೊಂಡರು. ವಿಜಯ್ ಮೊದಲ ಪತ್ನಿ ನಾಗರತ್ನ ಅವರು ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೆ, 5 ಲಕ್ಷ ಭದ್ರತಾ ಠೇವಣಿ ಪಡೆದ ಡಿಸಿಪಿ, ಸಮಾಜ ಸ್ವಾಸ್ಥ್ಯ ಹಾಳು ಮಾಡಿದರೆ, ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯ್ಗೆ ಎಚ್ಚರಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ವಿಜಯ್, ಅಣ್ಣಾಮಲೈ ಅವರು ಪ್ರಾಮಾಣಿಕ ಅಧಿಕಾರಿ. ಅವರ ಬಗ್ಗೆ ತುಂಬಾ ಗೌರವವಿದೆ. ಅವರು ಹೇಳಿದ ರೀತಿ ನಡೆದುಕೊಳ್ಳುತ್ತೇನೆ’ ಎಂದರು.