ಉಳ್ಳಾಲ, ನ 08 (MSP): ಬಾವಿ ನೀರಲ್ಲಿ ಪೆಟ್ರೋಲ್ ಮಿಶ್ರಣಗೊಂಡು ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡಬೇಕಾಗಿರುವ ಸ್ಥಿತಿ ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇರಳಕಟ್ಟೆಯ ಕಾನೆಕೆರೆ ಎಂಬಲ್ಲಿ ಬೆಳಕಿಗೆ ಬಂದಿದೆ.
ಕಾನೆಕೆರೆ ನಿವಾಸಿಗಳ ಸುಮಾರು ಐದು ಬಾವಿಗಳಲ್ಲಿ ಸಮಸ್ಯೆ ಉದ್ಭವಿಸಿದೆ. ಕಳೆದ ಹಲವು ವರ್ಷಗಳಿಂದ ದೇರಳಕಟ್ಟೆ ಜಂಕ್ಷನ್ನಿನಲ್ಲಿ ನಿರ್ಮಿಸಲಾದ ವಾಣಿಜ್ಯ ಮತ್ತು ವಸತಿ ಕಟ್ಟಡದ ತ್ಯಾಜ್ಯ ನೀರು ಕೆಳಭಾಗದ ಕಾನೆಕೆರೆ ಪ್ರದೇಶಕ್ಕೆ ಹರಿಯುತ್ತಿರುವುದರಿಂದ ಬಾವಿಗಳು ಕಲುಷಿತಗೊಂಡಿದ್ದವು. ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಡಳಿತದ ಮೊರೆ ಹೋದರೂ ಸ್ಪಂಧನೆ ಸಿಕ್ಕಿರಲಿಲ್ಲ. ಆ ಬಳಿಕ ಬೆಳ್ಮ ಗ್ರಾಮ ಪಂಚಾಯಿತಿ ವತಿಯಿಂದ ಕಟ್ಟಡದಿಂದ ಹೊರಬರುವ ತ್ಯಾಜ್ಯ ನೀರಿನ ಪೈಪನ್ನು ಮುಚ್ಚಲಾಗಿತ್ತು. ತದನಂತರ ಒಂದು ಹಂತಕ್ಕೆ ಸಮಸ್ಯೆ ಬಗೆಹರಿದಿತ್ತು. ಆದರೆ ಇದೀಗ ಕೆಲ ದಿನಗಳಿಂದ ಮತ್ತೆ ಬಾವಿ ಸಂಪೂರ್ಣ ಕಲುಷಿತಗೊಂಡು ತೈಲ ಮಿಶ್ರಿತ ನೀರು ಕಂಡುಬರುತ್ತಿದೆ. ಈ ಬಗ್ಗೆ ಮನೆಮಂದಿ ಪರಿಶೀಲಿಸುವ ಸಲುವಾಗಿ ಮಂಗಳವಾರ ರಾತ್ರಿ ಬಾವಿಯಲ್ಲಿರುವ ನೀರು ಹೊರತೆಗೆಯುತ್ತಿದ್ದಂತೆ, ಪೆಟ್ರೋಲ್ ದುರ್ವಾಸನೆ ಬರಲು ಆರಂಭವಾಗಿತ್ತು. ಇದನ್ನು ಪರಿಶೀಲಿಸುವ ಸಲುವಾಗಿ ಹೊರತೆಗೆದ ನೀರಿಗೆ ಬೆಂಕಿ ಹಚ್ಚಿದಾಗ ನೀರಿನ ಮೇಲೆಯೇ ಬೆಂಕಿ ಆವರಿಸಿದೆ. ಇದರಿಂದಾಗಿ ಸುಮಾರು ೫೦ ಮನೆಮಂದಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಕೊಡಲಿಯೇಟು ಬಿದ್ದಿದೆ. ಪಂಚಾಯಿತಿನಿಂದ ನೀರು ಸರಬರಾಜು ಮಾಡುತ್ತಿದ್ದರೂ, ಅದು ಸಾಲದೇ ಟ್ಯಾಂಕರ್ ಮೂಲಕ ಗ್ರಾಮಸ್ಥರೇ ಹಣ ಕೊಟ್ಟು ನೀರು ತರುವಂತಹ ದುಸ್ಥಿತಿ ಎದುರಾಗಿದೆ.
ಪೆಟ್ರೋಲ್ ಬಂಕ್ನಿಂದ ಸೋರಿಕೆ : ದೇರಳಕಟ್ಟೆ ಜಂಕ್ಷನ್ನಿನಲ್ಲಿ ಕಾರ್ಯಚರಿಸುತ್ತಿರುವ ಪೆಟ್ರೋಲ್ ಬಂಕ್ನಲ್ಲಿ ಸೋರಿಕೆ ಉಂಟಾಗಿ ಇಂತಹ ಸಮಸ್ಯೆ ಉದ್ಭವಿಸಿದೆ ಅನ್ನುವ ಆರೋಪ ಕಾನೆಕೆರೆ ನಿವಾಸಿ ಉಸ್ಮಾನ್ ಮಾಡಿದ್ದಾರೆ. ಈ ಕುರಿತು ಬಂಕ್ ಪ್ರಬಂಧಕರಲ್ಲಿ ದೂರಿದಾಗ, ತಮ್ಮ ಬಂಕ್ ನ ತೈಲದಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬರುತ್ತಿಲ್ಲ. ಬಂಕ್ ನಿಂದ ಯಾವುದೇ ಸೋರಿಕೆ ಉಂಟಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಸ್ಥಳಕ್ಕೆ ಬಂದು ನೋಡುವಂತೆ ತಿಳಿಸಿದರೂ ಯಾವುದೇ ರೀತಿಯಲ್ಲಿ ಸ್ಪಂಧನೆ ನೀಡಿಲ್ಲ ಅನ್ನುವ ಆರೋಪವನ್ನು ಮಾಡಿದ್ದಾರೆ.
ವಿಪರೀತ ಸೊಳ್ಳೆ ಕಾಟ: ಪ್ರೆಸ್ಟೀಜ್ ಮತ್ತು ಸಿದ್ಧಿ ವ್ಯೂ ಖಾಸಗಿ ಕಟ್ಟಡದ ವಿರುದ್ಧ ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಮ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತಕ್ಕೆ ತ್ಯಾಜ್ಯ ನೀರು ಹೊರಬಿಡುವ ವಿರುದ್ಧ ದೂರು ನೀಡಲಾಗಿತ್ತು. 2013 ರಿಂದ ಸಮಸ್ಯೆ ಉದ್ಭವಿಸಿದ್ದು, 2017 ರಲ್ಲಿ ಬೆಳ್ಮ ಗ್ರಾ.ಪಂ ಪೈಪ್ಗಳನ್ನು ಮುಚ್ಚಿತ್ತು. ಅಷ್ಟರಲ್ಲಿ ಬಹುತೇಕ ಬಾವಿಗಳು ಕಲುಷಿತಗೊಂಡಿತ್ತು. ಇದೀಗ ಪೈಪ್ ಮುಚ್ಚಿದ್ದರೂ ತ್ಯಾಜ್ಯ ನೀರು ಹೊರಬಿಡುತ್ತಿರುವುದರಿಂದ ಗ್ರಾಮಸ್ಥರಿಗೆ ವಿಪರೀತ ಸೊಳ್ಳೆ ಕಾಟ ಆರಂಭವಾಗಿದೆ. ಗ್ರಾಮದಲ್ಲಿ ಎಳೆಯ ಮಕ್ಕಳೇ ಇದ್ದು, ಅವರ ಮೈಪೂರ್ತಿ ಸೊಳ್ಳೆ ಕಡಿತದಿಂದ ಹುಣ್ಣುಗಳೇ ಆಗಿವೆ. ಆರೋಗ್ಯ ಇಲಾಖೆಯಿಂದ ಬಂದ ವರದಿಯಲ್ಲೂ ಬಾವಿಯ ನೀರು ಕುಡಿಯದಂತೆ ಎಚ್ಚರಿಕೆ ನೀಡಲಾಗಿದೆ. ಜನರಲ್ಲಿಯೂ ಆಗಾಗ್ಗ ಅನಾರೋಗ್ಯ ಕಾಣುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಶೀಘ್ರವೇ ಸಂಬಂಧಪಟ್ಟವರು ಕ್ರಮಕೈಗೊಳ್ಳದಿದ್ದಲ್ಲಿ ಗ್ರಾಮದಲ್ಲಿ ಅನಾಹುತ ಸಂಭವಿಸಬಹುದು ಎಂದು ಗ್ರಾಮಸ್ಥ ಇರ್ಷಾದ್ ಇಸ್ಮಾಯಿಲ್ ದೂರಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಬೆಳ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತ್ತಾರ್ ಅವರು ಬಾವಿಯಲ್ಲಿನ ನೀರು ಸಂಗ್ರಹಿಸಿ, ಪರಿಶೀಲನೆಗೆ ಕಳುಹಿಸಲಾಗುವುದು. ಅದರಲ್ಲಿ ಬಂದ ವರದಿ ಆಧಾರದಂತೆ ಸ್ಥಳೀಯ ಪೆಟ್ರೋಲ್ ಬಂಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.