ಮಲ್ಪೆ, ಸೆ 23 (DaijiworldNews/MS):ಇಲ್ಲಿನ ತೊಟ್ಟಂ ಪೊಟ್ಟಳಿವೆ ಬಳಿ ಕೈರಂಪಣಿ ಮೀನುಗಾರಿಕೆ ನಡೆಸುತ್ತಿರುವ ವೇಳೆ ಮೀನುಗಾರಿಕಾ ದೋಣಿಯಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ರಾಜೇಶ್ ಶ್ರೀಯಾನ್(37) ಎಂದು ಗುರುತಿಸಲಾಗಿದೆ.
ಸೆ.21ರಂದು ಸಂಜೆ ಘಟನೆ ನಡೆದಿದ್ದು, ತೆಂಕನಿಡಿಯೂರು ಗ್ರಾಮದ ಬೈಲಕೆರೆಯ ಶಿವ ಕುಂದರ್ ಎಂಬವರ ಕೈರಂಪಣಿ ನಾಡ ದೋಣಿಯಲ್ಲಿ 35 ಮೀನುಗಾರರ ತಂಡ ಮೀನುಗಾರಿಕೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ದೋಣಿಯಲ್ಲಿದ್ದ ಮೀನುಗಾರರು ಸಮುದ್ರದಲ್ಲಿ ಬಲೆಯನ್ನು ಬಿಡುತ್ತಾ ಬರುವಾಗ ಅಲೆಗಳ ಅಬ್ಬರಕ್ಕೆ ದೋಣಿಯಲ್ಲಿದ್ದ ರಾಜೇಶ್ ಆಯ ತಪ್ಪಿ ನೀರಿಗೆ ಬಿದ್ದರು ಎನ್ನಲಾಗುತ್ತಿದೆ.
ತೀವ್ರವಾಗಿ ಅಸ್ವಸ್ಥಗೊಂಡ ರಾಜೇಶ್ ಶ್ರೀಯಾನ್ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.