ಮಂಗಳೂರು, ಸೆ 22 (DaijiworldNews/MS): ಜಿಲ್ಲೆಯಾದ್ಯಂತ ಸೆ. 22ರ ಇಂದು ಕೋವಿಡ್ ಲಸಿಕಾ ಮೇಳ ಜರುಗಲಿದ್ದು, ಈ ಬಾರಿ ಜಿಲ್ಲೆಗೆ 75,000 ಡೋಸ್ ಗುರಿ ನೀಡಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳ, ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಈ ಲಸಿಕಾ ಅಭಿಯಾನ ನಡೆಯಲಿದೆ. ಇದರಲ್ಲಿ ಕೋವಿಶೀಲ್ಡ್ ಪ್ರಥಮ ಹಾಗೂ ಎರಡನೇ ಡೋಸ್ ಲಸಿಕೆಯನ್ನು ಎಲ್ಲೆಡೆ ನೀಡಲಾಗುವುದು ಹಾಗೂ ಕೊವ್ಯಾಕ್ಸಿನ್ ಲಸಿಕೆ ಆಯ್ದ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ಲಭ್ಯವಿರುವುದು.
ಲಸಿಕೆ ಪಡೆಯಲು ಬಾಕಿ ಇರುವ 18 ವರ್ಷ ಮೇಲ್ಪಟ್ಟ ಎಲ್ಲಾ ಫಲಾನುಭವಿಗಳು ಹಾಗೂ ಎರಡನೇ ಡೋಸ್ ಪಡೆಯಲು 84 ದಿನ ಪೂರೈಸಿದ ಎಲ್ಲಾ ಲಸಿಕಾ ಫಲಾನುಭವಿಗಳು ಈ ಶಿಬಿರದ ಪ್ರಯೋಜನವನ್ನು ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.