ಮಂಗಳೂರು, ನ07(SS): ಕರಾವಳಿ ಜಿಲ್ಲೆಗಳಲ್ಲಿನ ಮರಳು ಸಮಸ್ಯೆ ಪರಿಹಾರಕ್ಕಾಗಿ ಹಾಗೂ ಜನಪರ ಮರಳು ನೀತಿಗಾಗಿ ಆಗ್ರಹಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (CWFI) ನೇತ್ರತ್ವದಲ್ಲಿ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ CITU ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ, CRZ 1 ಮತ್ತು CRZ 2 ರ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಕಾನೂನಿನ ತೊಡಕು ಇದೆ. ಈ ಬಗ್ಗೆ ರಾಷ್ಟ್ರೀಯ ಹಸಿರು ಪೀಠದಲ್ಲಿ ಇತ್ಯರ್ಥವಾಗಬೇಕಾಗಿದೆ ಎಂದು ತಿಳಿಸಿದರು.
ವಿಪರ್ಯಾಸವೆಂದರೆ, ಕಳೆದ 18 ತಿಂಗಳಿನಿಂದ ಹಸಿರು ಪೀಠಕ್ಕೆ ನ್ಯಾಯಾಧೀಶರ ನೇಮಕ ಮಾಡದೆ ಕೇಂದ್ರದ ಬಿಜೆಪಿ ಸರಕಾರ ಕರಾವಳಿ ಜನತೆಯ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ವಾಸ್ತವತೆ ಹೀಗಿರುವಾಗ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿಯ ಜನಪ್ರತಿನಿಧಿಗಳು ಭಜನೆ ಮಾಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಮತ್ತು CITU ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕರಾವಳಿ ಜಿಲ್ಲೆಯಲ್ಲಿ ಉದ್ಭವಿಸಿದ ಕೃತಕ ಮರಳು ಸಮಸ್ಯೆಯಿಂದಾಗಿ ಕಟ್ಟಡ ನಿರ್ಮಾಣ ಉದ್ಯಮವು ತೀವ್ರ ಸಂಕಷ್ಟಕ್ಕೀಡಾಗಿದೆ. ಕಟ್ಟಡ ಕಾರ್ಮಿಕರ ಬವಣೆ ಹೇಳತೀರದಾಗಿದೆ. ಜೊತೆಗೆ ಜನಸಾಮಾನ್ಯರೂ ಕೂಡ ಸಮಸ್ಯೆಗೊಳಗಾಗಿದ್ದಾರೆ. ಒಂದು ಕಡೆ ಕೃತಕ ಮರಳು ಸಮಸ್ಯೆ, ಮತ್ತೊಂದು ಕಡೆ ಅಕ್ರಮ ಮರಳುಗಾರಿಕೆ ನಡೆಸಿ ವಿಪರೀತ ದರ ನಿಗದಿಪಡಿಸಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇರಳ ಸೇರಿದಂತೆ ಹೊರ ಜಿಲ್ಲೆಗಳಿಗೆ ಯಥೇಚ್ಚವಾಗಿ ಮರಳು ಸಾಗಾಟ ನಡೆಯುತ್ತಿದೆ. ಆದರೆ ಜಿಲ್ಲಾಡಳಿತ ಹಾಗೂ ಸರಕಾರ ಏನೂ ಆಗಿಲ್ಲವೆಂಬಂತೆ ವರ್ತಿಸುತ್ತಿದೆ. ಮರಳು ಸಮಸ್ಯೆಯನ್ನು ಈ ಕೂಡಲೇ ಪರಿಹರಿಸದಿದ್ದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಘೆರಾವ್, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕರಾದ ಯು. ಜಯಂತ ನಾಯಕ್ ಮರಳು ಸಮಸ್ಯೆಯನ್ನು ಇನ್ನೂ ಕೂಡ ಇತ್ಯರ್ಥ ಮಾಡದ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.