ಕಾರ್ಕಳ, ಸೆ.21 (DaijiworldNews/HR): ವಿಸ್ತೃತ ಬಸ್ ನಿಲ್ದಾಣ ಹಾಗೂ ಬಂಡೀಮಠ ಬಸ್ ನಿಲ್ದಾಣಗಳೆರಡನ್ನು ಸಮಾನವಾಗಿ ಸದ್ಭಾವಕೆ ಮಾಡುವಂತೆ ರಾಜ್ಯ ಹೈಕೋರ್ಟ್ ಅದೇಶ ನೀಡಿ ವರ್ಷಗಳೆ ಕಳೆದು ಹೋಗಿದೆ. ಹೈಕೋರ್ಟ್ ಅದೇಶಕ್ಕೆ ಜಿಲ್ಲಾಡಳಿತ, ಕಾರ್ಕಳ ಪುರಸಭೆ ಗೌರವಿಸಿಲ್ಲ. ಈ ಕುರಿತು ಅರ್ಜಿದಾರರು ಮತ್ತೇ ನ್ಯಾಯಾಲಯಕ್ಕೆ ಮೋರೆ ಹೋದರೆ ಪುರಸಭಾ ಸದಸ್ಯರು ಸಹಿತ ಅಧಿಕಾರಿಗಳು ಕಾನೂನಿನ ಕುಣಿಕೆಯಲ್ಲಿ ಸಿಲುಕಬೇಕಾದಿತ್ತೆಂದು ಕಾರ್ಕಳ ಪುರಸಭಾ ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಹೇಳಿದರು.
ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮ ಅವರು ಅಧ್ಯಕ್ಷತೆಯಲ್ಲಿ ಜರುಗಿದ್ದ ಸಾಮಾನ್ಯ ಸಭೆಯ ಕಲಾಪವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಭರತ್ಲಾಲ್ ಮೀನಾ ಅವರು ಕಾರ್ಕಳ ಬಸ್ ನಿಲ್ದಾಣಕ್ಕೆಂದು ಬಂಡಿಮಠ ದಲ್ಲಿ ಜಾಗವನ್ನು ಕಾದಿರಿಸಿದ್ದರು. ಕಾರ್ಕಳ ಪುರಸಭೆಯು ಕಾಂಗ್ರೆಸ್ನ ಅವಧಿಯಲ್ಲಿ ಇದ್ದಾಗ ಅಂದಿನ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಅವರ ಮುತುವರ್ಜಿಯಿಂದ ರೂ. 2.75 ಕೋಟಿ ಅನುದಾನದೊಂದಿಗೆ ಬಂಡೀಮಠ ಬಸ್ ನಿಲ್ದಾಣವನ್ನು ಕಾಂಕ್ರೀಟ್ಕರಣಗೊಳಿಸಿ ಅಭಿವೃದ್ಧಿ ಪಡಿಸಿ ಅಂದಿನ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಲೋಕಾರ್ಪಣೆಗೈದಿದ್ದರು. ನಂತರದ ದಿನಗಳಲ್ಲಿ ಆ ಬಸ್ ನಿಲ್ದಾಣಕ್ಕೆ ಡಾ.ವಿ.ಎಸ್.ಆಚಾರ್ಯ ನಾಮಕರಣಗೈಯುವ ಮೂಲಕ ಅಂದಿನ ಪುರಸಭಾ ಆಡಳಿತವು ಅಭಿವೃದ್ಧಿಗೆ ಒತ್ತು ನೀಡಿತ್ತು.
ಸ್ಥಾಪಿತ ಹಿತಾಸಕ್ತಿಯಿಂದಾಗಿ ಕೊಟ್ಯಾಂತರ ರೂಪಾಯಿ ವೆಚ್ಚ ಮಾಡಿದ ಬಂಡೀಮಠ ಬಸ್ ನಿಲ್ದಾಣ ಪಾಳು ಬೀಳುವ ಸ್ಥಿತಿಗೆ ತಲುಪಿತು. ಈ ಕುರಿತು ನಾಗರಿಕರು ಹೈಕೊರ್ಟ್ಗೆ ಮೋರೆ ಹೋಗಿದ್ದರು ಎಂದು ಅಶ್ಪಕ್ ಅಹಮ್ಮದ್ ಸಭೆಯಲ್ಲಿ ಪ್ರಸ್ತಾಪಿದರು.
ಈ ಕುರಿತು ಉಡುಪಿ ಜಿಲ್ಲಾಧಿಕಾರಿಯವರ ವಿಚಾರ ಗಮನಕ್ಕೆ ತಂದು ಹೈಕೋರ್ಟ್ ಅದೇಶವನ್ನು ಅನುಷ್ಠಾನಗೊಳಿಸುವ ಎಂದು ಮುಖ್ಯಾಧಿಖಾರಿ ರೂಪಾ ಶೆಟ್ಟಿ ಸಭೆಯಲ್ಲಿ ತಿಳಿಸಿದರು.
ಬಂಡೀಮಠದ ಪ್ರಮುಖ ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ 3 ಮರಗಳಿವೆ. ಅದರ ತಳಭಾಗದಲ್ಲಿಯೇ ರಿಕ್ಷಾ ನಿಲ್ದಾಣವಿದೆ. ಮರದ ಬುಡದಲ್ಲಿ ಭಾರೀ ಗಾತ್ರದಲ್ಲಿ ತೊಳ್ಳು ಆಗಿದೆ ಎಂದು ಅಶ್ಪಕ್ ಅಹಮ್ಮದ್ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಅದಕ್ಕೆ ಉತ್ತರಿಸಿದ ಕಾರ್ಕಳ ನಗರ ಅರಣ್ಯಧಿಕಾರಿ ಚಂದ್ರಕಾಂತ ವಿ.ಪೋಳ, ಅರಣ್ಯ ಇಲಾಖೆಯ ಅನುಮಮತಿಯೊಂದಿಗೆ ಮರಗಳ ಕೊಂಬೆಗಳನ್ನು ಕಡಿಯುವ ಅಧಿಕಾರವನ್ನು ಪುರಸಭೆ ಹೊಂದಿದೆ. ಮರದ ದಿಮ್ಮಿಗಳನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಬೇಕೆಂದರು.
ವಿನ್ನಿ ಬೋಲ್ಡ್ ಮೆಂಡೋನ್ಸಾ ಮಾತನಾಡಿ, "ಕೈಗಾರಿಕಾ ಸಂಕೀರ್ಣ ಪ್ರದೇಶದಲ್ಲಿ ರಸ್ತೆಯಂಚಿನದಲ್ಲಿಯೇ ಅಪಾಯಕಾರಿ ಮರಗಳು ಬೆಳೆದು ರಸ್ತೆಯನ್ನೇ ಕ್ರಮಿಸುತ್ತಿದೆ. ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಿದರೂ ಪ್ರಯೋಜನ ಶೂನ್ಯವಾಗಿದೆ. ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ರಸ್ತೆಯನ್ನೇ ಕಬಳಿಸಿದೆ. ಮರದ ಬೇರುಗಳು ರಸ್ತೆಯ ಡಾಂಬರನ್ನು ಕಿತ್ತು ಹಾಕಿದೆ" ಎಂದರು.
ಶುಭದರಾವ್ ಮಾತನಾಡಿ, ಕರಿಯಕಲ್ಲು ರುದ್ರಭೂಮಿಯಲ್ಲಿ ಅಪಾಯಕಾರಿ ಅಲ್ಲದ ಮರಗಳನ್ನು ಕೆಲವರು ಕಡಿದು ಹಾಕಿದ್ದಾರೆ. ಈ ಕುರಿತು ಪುರಸಭೆಗೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿ ೩ ತಿಂಗಳು ಕಳೆದಿದೆ. ಯಾವುದೇ ಕ್ರಮವಿಲ್ಲ. ಬೆಲೆಬಾಳುವ ಮರದ ದಿಮ್ಮಿಗಳು ಅರಣ್ಯ ಇಲಾಖೆಯ ಡಿಪೋ ಸೇರಿದಿಯೇ ಎಂದು ಖಾರವಾಗಿ ಪ್ರಶ್ನಿಸಿದರು.
ನೀತಾ ಆಚಾರ್ಯ, ನಳಿನಿ ಆಚಾರ್ಯ, ಪ್ರಭಾ ಕಿಶೋರ್, ಪ್ರಸನ್ನ.ಕೆ ಮೊದಲಾದವರು ಈ ಚರ್ಚೆಯಲ್ಲಿ ಪಾಲ್ಗೊಂಡರು.