ಬಳ್ಳಾರಿ, ನ07(SS): ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನದ ಭೀತಿಯನ್ನು ಎದುರಿಸುತ್ತಿದ್ದು, ಅವರು ಮತ್ತೆ ಜೈಲಿಗೆ ಹೋಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರದ್ದಾದ ನೋಟುಗಳನ್ನು ಜನಾರ್ದನ ರೆಡ್ಡಿ ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ವಿಚಾರಣೆಗೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಬೆಂಗಳೂರು ಸಿಸಿಬಿ ವಿಶೇಷ ತಂಡವು ಜನಾರ್ದನ ರೆಡ್ಡಿ ಅವರನ್ನು ಭೇಟಿ ಆಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈಗಾಗಲೇ ರದ್ದಾದ ನೋಟುಗಳ ಅಕ್ರಮ ವರ್ಗಾವಣೆ ಪ್ರಕರಣದಡಿ, ಸಿಸಿಬಿ ತಂಡವು ಜನಾರ್ದನ ರೆಡ್ಡಿ ಅವರ ಮೂವರು ಆಪ್ತರನ್ನು ವಶಕ್ಕೆ ಪಡೆದಿದ್ದಾರೆ.
ಅಂಬಿಡೆಂಟ್ ಕಂಪನಿಯ ಮಾಲೀಕ ಫರೀದ್, ಬಿಲ್ಡರ್ ಬ್ರಿಜೇಶ್, ರಮೇಶ್ ಕೊಠಾರಿ ಸಿಸಿಬಿ ವಶದಲ್ಲಿರುವ ಆರೋಪಿಗಳು. ಪ್ರಮುಖ ಆರೋಪಿ ಜನಾರ್ದನ ರೆಡ್ಡಿ ಪಿಎಗಾಗಿ ಸಿಸಿಬಿ ತಂಡ ತೀವ್ರ ಶೋಧ ನಡೆಸುತ್ತಿದೆ.