ಉಡುಪಿ, ನ07(SS): ನಿರೀಕ್ಷೆಯನ್ನು ಮೀರಿ ಕಾಂಗ್ರೆಸ್- ಜೆಡಿಎಸ್ ಬಳ್ಳಾರಿ, ಜಮಖಂಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಉಪಚುನಾವಣೆಯನ್ನು ಗೆಲ್ಲಲು ಡಿಕೆಶಿ ನೇತೃತ್ವದಲ್ಲಿ ಹಣದ ಹೊಳೆಯನ್ನೇ ಹರಿಸಲಾಗಿದೆ. ಹಣದ ದಂಧೆಯನ್ನು ತಡೆಯದಿದ್ದರೆ ಏರುಪೇರಾಗುತ್ತೆ ಅನ್ನೋ ಆತಂಕ ನಮ್ಮಲ್ಲಿತ್ತು. ಆಳುವ ಪಕ್ಷ ತನ್ನೆಲ್ಲಾ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಹೇಳಿದರು.
ಬಿಜೆಪಿ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತದೆ. ಬಿಜೆಪಿ ಪಕ್ಷವು ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದು ಅಧಿಕಾರ ಸ್ಥಾಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆಯಲ್ಲಿ ಶಿವಮೊಗ್ಗದ ಗೆಲುವು ಸಂತೋಷವನ್ನು ನೀಡಿದೆ. ನಮ್ಮ ಪಕ್ಷಕ್ಕೆ ಆತ್ಮಾವಲೋಕನ ಮಾಡಲು ಸಕಾಲವಾದ ಸಮಯ. ತಳಮಟ್ಟದಿಂದಲೇ ಪಕ್ಷವನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.