ಬೆಂಗಳೂರು, ನ 06(SM): ರಾಮನಗರದಲ್ಲಿ ಬಿಜೆಪಿ ಸೋತಿಲ್ಲ. ಆದರೆ, ಬಳ್ಳಾರಿಯಲ್ಲಿ ಸೋತಿದ್ದೇವೆ. ರಾಮನಗರದಲ್ಲಿ ಸಮ್ಮಿಶ್ರ ಸರಕಾರದ ಕುತಂತ್ರದಿಂದ ನಮಗೆ ಸೋಲಾಗಿದೆಯೇ ಹೊರತು ನಾವು ಸೋತಿಲ್ಲ. ಉಪಚುನಾವಣೆ ಫಲಿತಾಂಶದಿಂದ ನಾವು ಮತ್ತು ನಮ್ಮ ಪಕ್ಷ ಎದೆಗುಂದಿಲ್ಲ ಅಥವಾ ಮುಖಭಂಗ ಅನುಭನವಿಸಿಲ್ಲ' ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮಂಗಳವಾರ ಹೊರಬಿದ್ದ ಎರಡು ವಿಧಾನಸಭಾ ಕ್ಷೇತ್ರ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ಮತದಾರರಿಗೂ ತಮ್ಮ ಅಭಿನಂದನೆ ಸಲ್ಲಿಸಿದರು.
5 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತ ಚಲಾಯಿಸಿದ ಎಲ್ಲಾ ಮತದಾರರಿಗೂ ನನ್ನ ಅಭಿನಂದನೆ ಮತ್ತು ವಂದನೆಗಳು. 5 ಕ್ಷೇತ್ರಗಳ ಮತದಾರರ ತೀರ್ಪನ್ನು ನಾನು ಮತ್ತು ನಮ್ಮ ಪಕ್ಷ ಒಪ್ಪಿಕೊಂಡಿದೆ. ಸತ್ಯಸಂಗತಿ ಎಂದರೆ ಈ ಚುನಾವಣೆಯಲ್ಲಿ ಹಣ ಮತ್ತು ಹೆಂಡದ ಪಾತ್ರ ಬಹಳಷ್ಟಿದೆ. ಮತ್ತು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹಣ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ಚುನಾವಣೆಯನ್ನು ಗೆದ್ದಿವೆ ಎಂದು ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
"ಬಳ್ಳಾರಿ ಮತ್ತು ಜಮಖಂಡಿಯಲ್ಲಿ ನಾವು ಗೆದ್ದಿದ್ದರೆ ಸಮಾಧಾನವಿರುತ್ತಿತ್ತು. ಶಿವಮೊಗ್ಗದಲ್ಲಿ ಕೂಡ ನಾವು ಬಹಳಷ್ಟು ಅಂತರದಿಂದ ಗೆಲ್ಲುತ್ತೇವೆ ಎಂದು ನಿರೀಕ್ಷಿಸಿದ್ದೆವು. ಜೆಡಿಎಸ್ ಹಣದ ಹೊಳೆ ಹರಿಸಿದೆ, ನಾವು ಅದರಲ್ಲಿ ಈಜಿಕೊಂಡು ದಡ ಸೇರಿದ್ದೇವೆ. 52,500 ಅಂತರದಿಂದ ಗೆದ್ದಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿದ್ದರೂ ಕೂಡ ಇಷ್ಟು ಅಂತರ ಸಾಧಿಸಿದ್ದು ಒಂದು ಸಾಹಸವೇ. ಇದರ ಜೊತೆಗೆ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ 2 ಲಕ್ಷ 44 ಸಾವಿರದಷ್ಟು ಮತಗಳನ್ನು ಪಡೆದದ್ದು ನಮಗೆ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಇದು ಸಹಕಾರಿಯಾಗುತ್ತದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ