ಬೆಂಗಳೂರು, ನ06(SS): ಮೋದಿಯವರ ಆಡಳಿತದಿಂದ ಜನ ಎಷ್ಟು ಬೇಸತ್ತಿದ್ದಾರೆ ಎಂಬುದನ್ನು ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ಆಗಿರುವ ಹೀನಾಯ ಸೋಲು ಸೂಚಿಸುತ್ತದೆ ಎಂದು ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಬಿಜೆಪಿ ಹೀನಾಯವಾಗಿ ಸೋಲನ್ನು ಅನುಭವಿಸಿದೆ. ರಾಜ್ಯದಲ್ಲಿ ನಡೆದ ಈ ಉಪ ಚುನಾವಣೆಗಳು ಪ್ರಧಾನಿ ಮೋದಿ ಆಡಳಿತದ ವಿರುದ್ಧದ ಸೂಚನೆಯಾಗಿದೆ. ಹೀಗಾಗಿ ಜನ ಮೋದಿಯವರ ಆಡಳಿತದಿಂದ ಬೇಸತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿನ ಉಪ ಚುನಾವಣೆಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಸೋಲಿಗೆ ಸೂಚನೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಗೆಲುವು ಸಾಧಿಸುತ್ತದೆ ಎನ್ನುವುದನ್ನು ಇದು ತೋರಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರು ಭಾರೀ ಅಂತರದಿಂದ ಗೆದ್ದಿದ್ದಾರೆ. ನಮಗೆ ಮೊದಲೇ ನಿರೀಕ್ಷೆ ಇತ್ತು. ಹಾಗೆ ಆಗಿದೆ. ಶಿವಮೊಗ್ಗದಲ್ಲೂ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಗೆಲ್ಲುತ್ತಾರೆಂದು ವಿಶ್ವಾಸ ಇತ್ತು. ಅಲ್ಲೂ ಸಹ ಬಿಜೆಪಿಯವರು ಬಹಳ ಅಂತರದಿಂದ ಗೆಲುವು ಸಾಧಿಸಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.