ಬೆಂಗಳೂರು, ಅ 13: ಬಂಟ್ವಾಳದ ಅನಿತಾ ಕೊಲೆ ನಡೆಸಿದ ಸೈನೈಡ್ ಕಿಲ್ಲರ್ ಮೋಹನ್ ನನ್ನು ತಪ್ಪಿತಸ್ಥ ಎಂದು ಘೋಷಿಸಿರುವ ಹೈಕೋರ್ಟ್, ಅಧೀನ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ಮಾರ್ಪಾಡು ಮಾಡಿ ಸಾಯುವವರೆಗೂ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಹಿಳೆಯರ ಕೊಲೆ ಹಾಗೂ ದರೋಡೆ ಸಂಬಂಧದ 3 ಪ್ರಕರಣಗಳಲ್ಲಿ ಅಧೀನ ನ್ಯಾಯಾಲಯ ಮೋಹನ್ ಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇದೀಗ ಅನಿತಾ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ನೀಡಿದ್ದು, ಮತ್ತೆರಡು ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿದೆ.
ಮಹಿಳೆಯರ ಪಾಲಿಗೆ ಮೋಹನ್ ಕಂಟಕನಾಗಿದ್ದು, ಸಾಯುವವರೆಗೆ ಈತನನ್ನು ಜೈಲಿನಲ್ಲಿರಿಸಬೇಕು. ಈತನಿಗೆ ಯಾವುದೇ ಕಾರಣಕ್ಕೂ ಕ್ಷಮದಾನ ನೀಡಬಾರದು ಎಂದು ಹೈಕೋರ್ಟ್ ನ ವಿಭಾಗೀಯ ಪೀಠ ತೀರ್ಪಿನಲ್ಲಿ ತಿಳಿಸಿದೆ.