ಮಂಗಳೂರು, ನ06(SS): ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳು ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಗೆಲುವಿನ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ, ಕಾಂಗ್ರೆಸ್ ನಾಯಕರು ಸಂಭ್ರಮ ಆಚರಿಸಿದ್ದಾರೆ.
ಈ ವೇಳೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಮತದಾರರು 4 ಕಡೆ ಮೈತ್ರಿ ಕೂಟ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ. ಈ ಗೆಲುವು ನಮಗೆ ಖುಷಿ ತಂದಿದೆ.ಹಲವು ಬಾರಿ ಬಿಜೆಪಿಯು ಮೈತ್ರಿ ಕೂಟ ಸರಕಾರವನ್ನು ಕೆಳಗೆ ಹಾಕಲು ಪ್ರಯತ್ನಿಸುತ್ತಿತ್ತು. ಆದರೆ ಇದು ಸಾಧ್ಯವಾಗಿಲ್ಲ ಎಂದು ಹೇಳಿದರು.
ಈ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ದೀಪಾವಳಿಯ ಕೊಡುಗೆ. ಮುಂದಿನ ದಿನಗಳಲ್ಲಿಯೂ ಈ ಮೈತ್ರಿ ಕೂಟವು ಮುಂದುವರಿಯಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳು ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸಾಧಿಸಿದ ಈ ಗೆಲುವು ದ.ಕ. ಜಿಲ್ಲೆಯಲ್ಲೂ ಪರಿಣಾಮ ಬೀರಲಿದೆ ಎಂದು ಸಂತಸ ವ್ಯಕ್ತಪಡಿಸಿದರು.