ಮಂಗಳೂರು, ಸೆ.17 (DaijiworldNews/PY): ದ.ಕ. ಜಿಲ್ಲೆಯಲ್ಲಿ ಸೆ.17ರಂದು 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭಗೊಂಡಿವೆ.
ಜಿಲ್ಲಾಡಳಿತ ಹೊರಡಿಸಿದ ಸೂಚನೆಯ ಪ್ರಕಾರ, "ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳನ್ನು ಶಾಲೆಯ ಮುಖ್ಯಸ್ಥರು ಒದಗಿಸಬೇಕು. ಕಾಲಕಾಲಕ್ಕೆ ಶಿಕ್ಷಕರ ಹಾಗೂ ಶಾಲಾ ಸಿಬ್ಬಂದಿಗಳ ಕೊರೊನಾ ಪರೀಕ್ಷೆ ನಡೆಸಬೇಕು. ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಆನ್ಲೈನ್ ಮೂಲಕ ತರಗತಿ ನಡೆಸಬೇಕು" ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು.
"ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿ ಆರ್ಟಿಪಿಆರ್ ನೆಗೆಟಿವ್ ವರದಿಯೊಂದಿಗೆ ಶಾಲೆಗೆ ಹಾಜರಾಗಬೇಕು. ಜಿಲ್ಲೆಯ ಶಾಲೆಗಳಿಗೆ ಬರುವ ಶಿಕ್ಷಕರು ಮತ್ತು ಸಿಬ್ಬಂದಿ, ಎರಡನೇ ಡೋಸ್ ಕೊರೊನಾ ಲಸಿಕೆ ಪಡೆದಿರಬೇಕು" ಎಂದು ಹೇಳಿದ್ದರು.
ಜಿಲ್ಲಾಡಳಿತವು ಸೆಪ್ಟೆಂಬರ್ 20 ರಿಂದ 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ನಡೆಸಲು ಅನುಮತಿಸಿದೆ.