ತಿರುವನಂತಪುರ, ನ 05 (MSP): ಶಬರಿಮಲೆಯಲ್ಲಿ ನಡೆದ ಪ್ರತಿಭಟನೆ, ಹೋರಾಟ ನಮ್ಮ ಪಕ್ಷದ ಪ್ಲಾನ್ ಎಂದು ಕೇರಳ ಬಿಜೆಪಿ ಅಧ್ಯಕ್ಷ ಶ್ರೀಧರನ್ ಪಿಳ್ಳೈ ಒಪ್ಪಿಕೊಂಡಿರುವ ಆಡಿಯೋ ತುಣುಕೊಂದು ಸೋಮವಾರ ಬಹಿರಂಗವಾಗಿದೆ. ಶ್ರೀಧರನ್ ಪಿಳ್ಳೈ ಯುವ ಮೋರ್ಚಾ ಸಭೆಯಲ್ಲಿ ಮಾತನಾಡಿರುವ ಆಡಿಯೋ ತುಣುಕು ಇದಾಗಿದ್ದು, ಇದರಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ನಮ್ಮ ಪಕ್ಷದಿಂದ ಯೋಜಿತವಾಗಿದ್ದು ಮಾತ್ರವಲ್ಲದೆ ಇದು ನಮ್ಮ ಬಿಜೆಪಿ ಪಕ್ಷದ ಅಜಂಡಾವಾಗಿತ್ತು ಎಂದಿದ್ದಾರೆ.
ಅಕ್ಟೋಬರ್ 17 ರಿಂದ ಅ.22ರ ವರೆಗೆ ನಡೆದ ಪ್ರತಿಭಟನೆಯನ್ನು ಯೋಚಿಸಿ ಕಾರ್ಯರೂಪಕ್ಕೆ ತರಲು ನಮ್ಮ ಕಾರ್ಯಕರ್ತರ ಬಳಿ ಚರ್ಚಿಸಿದೆವು. ಇದನ್ನು ಪಕ್ಷ ಕಾರ್ಯಕರ್ತರು ಒಪ್ಪಿಕೊಂಡು ಕಾರ್ಯರೂಪಕ್ಕೆ ತಂದರು ಎಂದು ಹೇಳಿದ್ದಾರೆ.
ಮೊದಲೇ ನಿಗದಿಗೊಳಿಸಿದಂತೆ ಗೊತ್ತು ಮಾಡಿದ ಸ್ಥಳಗಳಲ್ಲಿ ಕ್ಯಾಂಪ್ ಮಾಡಲು ಇಬ್ಬರು ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನು ಇದಕ್ಕಾಗಿ ನಿಯೋಜನೆ ಮಾಡಲಾಗಿತ್ತು. ಅವರ ಜವಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹೀಗಾಗಿ ಮಹಿಳೆಯರು ದೇವಾಲಯ ಪ್ರವೇಶಿಸುವ ಯತ್ನವನ್ನು ನಮ್ಮ ಅಣತಿಯಂತೆ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಫಲಗೊಳಿಸಿದ್ದಾರೆ ಎಂದು ಶ್ರೀಧರನ್ ಪಿಳ್ಳೈ ತಿಳಿಸಿದ್ದಾರೆ.
ಇದಲ್ಲದೆ ಶಬರಿಮಲೆ ಮುಖ್ಯ ಅರ್ಚಕ ಕಾಂತರಾರು ರಾಜೀವರು ನನಗೆ ಫೋನ್ ಮಾಡಿ, ಮಹಿಳೆಯರು ದೇವಸ್ಥಾನ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಅವರಿಗೆ ಪ್ರವೇಶ ನಿರಾಕರಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂಬುದನ್ನು ಗಮನಕ್ಕೆ ತಂದರು. ಆಗಲೇ ನಾವು ನಿಮ್ಮ ಜೊತೆ ಇದ್ದೇವೆ ಎಂದು ಅವರಿಗೆ ನಾನು ಭರವಸೆ ಕೊಟ್ಟೆ ಎಂದಿದ್ದಾರೆ.