ಲಕ್ನೋ, ನ 05 (MSP): ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ’ಅವನಿ ಹುಲಿ’ ಹತ್ಯೆ ಪ್ರಕರಣದ ಬಳಿಕ ಇದೀಗ, ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಗ್ರಾಮಸ್ಥರೇ ಸೇರಿ ಹುಲಿಯೊಂದನ್ನು ಟ್ರ್ಯಾಕ್ಟರ್ ಹತ್ತಿಸಿ ಕ್ರೂರವಾಗಿ ಹತ್ಯೆಗೈದ ಘಟನೆ ಲಕ್ನೋ ದುದ್ವಾ ನ್ಯಾಶನಲ್ ಪಾರ್ಕ್ ಬಳಿ ವರದಿಯಾಗಿದೆ.
ಕೆಲ ದಿನದ ಹಿಂದೆ ದುದ್ವಾ ಅರಣ್ಯ ಪ್ರದೇಶದ ದಾರಿಯಲ್ಲಿ ಸಾಗುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬನ ಮೇಲೆ ಹುಲಿ ದಾಳಿ ನಡೆಸಿತ್ತು. ಪರಿಣಾಮ ಗಂಭೀರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದ. ಇದರಿಂದ ಆಕ್ರೋಶಗೊಂಡ ಜನರು ದುದ್ವಾ ನ್ಯಾಶನಲ್ ಪಾರ್ಕ್ ಗೆ ನುಗ್ಗಿ, ಅರಣ್ಯ ಪಾಲಕನ ಮೇಲೆ ದಾಳಿ ನಡೆಸಿ, ಆತನಿಂದ ಟ್ರ್ಯಾಕ್ಟರ್ ಅನ್ನು ಬಲವಂತವಾಗಿ ಕಸಿದುಕೊಂಡು ನಂತರ ಹುಲಿಯನ್ನು ಅಟ್ಟಾಡಿಸಿ ಅದರ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಂದು ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಅರಣ್ಯ ಇಲಾಖೆಯೂ '10 ವರ್ಷಗಳಿಂದ ದುದ್ವಾ ನ್ಯಾಶನಲ್ ಪಾರ್ಕ್ ಅರಣ್ಯವನ್ನು ತನ್ನ ವಾಸಸ್ಥಾನವನ್ನಾಗಿಸಿದ್ದ ಹುಲಿ ಒಮ್ಮೆಯೂ ಯಾರೊಬ್ಬರ ಮೇಲೆಯೂ ದಾಳಿ ಮಾಡಿರಲಿಲ್ಲ' ಎಂದು ಮಾಹಿತಿ ನೀಡಿದೆ
ಆದರೆ ಈ ಹುಲಿ ಮನುಷ್ಯರ ಮೇಲೆ ದಾಳಿ ನಡೆಸುತ್ತಿದೆ ಎಂಬುದಾಗಿ ಅರಣ್ಯಾಧಿಕಾರಿಗಳಿಗೆ ಹಲವಾರು ಸಾರಿ ದೂರು ನೀಡಿದ್ದರೂ ಇಲ್ಲಿಯವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ನಡುವೆ ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳನ್ನು ನಾವು ಗುರುತಿಸಿದ್ದು, ಅವರ ವಿರುದ್ಧ ಎಫ್ ಐಆರ್ ದಾಖಲಿಸುವುದಾಗಿ ದುದ್ವಾ ನ್ಯಾಶನಲ್ ಪಾರ್ಕ್ ನ ನಿರ್ದೇಶಕ ಮಾಹಾವಿರ್ ಕೋಜಿಲಾಂಗಿ ತಿಳಿಸಿದ್ದಾರೆ.