ಪುತ್ತೂರು, ನ 05 (MSP): ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಇನ್ನು ಕೆಲ ದಿನಗಳ ಕಾಲ ಜೈಲಲ್ಲೇ ಕಾಲ ಕಳೆಯುವಂತಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಮತ್ತು ತಂಡದ ನ್ಯಾಯಾಂಗ ಬಂಧನ ಅವಧಿ ಇಂದು ಮತ್ತೆ ವಿಸ್ತರಣೆಯಾಗಿದ್ದು ಹೀಗಾಗಿ ನವೆಂಬರ್ 19ರವರೆಗೆ ಚೈತ್ರಾ ಮತ್ತವರ ತಂಡ ಜೈಲಲ್ಲೇ ಕಾಲ ಕಳೆಯಬೇಕಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಿದೆ. ನ.03 ರ ಶನಿವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ, ನ್ಯಾಯಾಂಗ ಬಂಧನದಲ್ಲಿರುವ ಚೈತ್ರ ಹಾಗೂ ಆಕೆಯ ತಂಡದ ಇತರ ಆರು ಸದಸ್ಯರನ್ನು ಖುದ್ದು ಸೋಮವಾರ ಪುತ್ತೂರು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ಸೂಚನೆ ನೀಡಿತ್ತು. ಅಲ್ಲದೆ ಮೇಲ್ನೋಟಕ್ಕೆ ಆರೋಗ್ಯವಾಗಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಪ್ರಶ್ನಿಸಿದ್ದ ನ್ಯಾಯಾಧೀಶರು ಚೈತ್ರಾ ಹಾಗೂ ಉಳಿದ ಆರು ಮಂದಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಜೈಲು ಸೂಪರಿಟೆಂಡೆಂಟ್ ನ್ನು ಸೋಮವಾರದಂದು ನ್ಯಾಯಾಲಯದಲ್ಲಿ ಹಾಜರಿರಲು ಸೂಚಿಸಿದ್ದರು. ಅಲ್ಲದೆ ಆಕೆ ಮತ್ತು ತಂಡಕ್ಕೆ ನೀಡಿದ ಚಿಕಿತ್ಸೆ ಬಗ್ಗೆಯೂ ನ್ಯಾಯಾಲಯಕ್ಕೆ ವಿವರ ಸಲ್ಲಿಸಲು ನ್ಯಾಯಾಧೀಶರು ಆದೇಶಿಸಿದ್ದರು.
ಈ ಹಿನ್ನಲೆಯಲ್ಲಿ ಚೈತ್ರಾ ಮತ್ತವರ ತಂಡವನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲದೇ ಚೈತ್ರಾ ತಂಡದೊಂದಿಗೆ ಮಂಗಳೂರು ಜೈಲು ಸೂಪರಿಟೆಂಡೆಂಟ್ ಮತ್ತು ಚಿಕಿತ್ಸೆ ನೀಡಿದ ವೈದ್ಯರು ಕೂಡ ಹಾಜರಾಗಿದ್ದರು. ಆಕೆಯ ಆರೋಗ್ಯದ ಬಗ್ಗೆ ರಿಪೋರ್ಟ್ ನೀಡಿದ ವೈದ್ಯರು, ಚೈತ್ರಾ ಆರೋಗ್ಯದಲ್ಲಿ ಸಮಸ್ಯೆಯಿಲ್ಲ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ತಾಲೂಕು ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಮತ್ತು ಚೈತ್ರಾ ಕುಂದಾಪುರ ತಂಡಗಳ ನಡುವೆ ನಡೆದ ಘರ್ಷಣೆ ಪ್ರಕರಣದಲ್ಲಿ ಆ.31 ರಲ್ಲಿ ಬಂಧಿತನಾಗಿದ್ದ ಗುರುಪ್ರಸಾದ್ ಪಂಜ ಅವರಿಗೆ ಸುಳ್ಯ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿತ್ತು