ವಿಟ್ಲ, ಸೆ 15 (DaijiworldNews/MS): ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ಗೆ ಹೋಗಿದ್ದ ವೈದ್ಯೆಯೊಬ್ಬರು ದುರಂತ ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಅಡ್ಯನಡ್ಕ ವಾರಣಾಶಿಯಲ್ಲಿ ನಡೆದಿದೆ.
ಡಾ.ಮೈಜೀ ಕರೋಲ್ ಫರ್ನಾಂಡೀಸ್ (31) ಮೃತ ಯುವತಿ. ಕೃಷಿ ಅಧ್ಯಯನಕ್ಕೆಂದು ಕೇಪು ಗ್ರಾಮದ ವಾರಾಣಸಿ ಫಾರ್ಮ್ ಹೌಸ್ಗೆ ಎರಡು ದಿನಗಳ ಹಿಂದೆ ಮೈಜಿ ಆಗಮಿಸಿದ್ದರು. ಮಂಗಳವಾರ ಸೆಪ್ಟೆಂಬರ್ 14 ರಂದು ಸಂಜೆ 5.45 ರ ಫಾರ್ಮ್ ಹೌಸ್ನ ಕೃಷಿ ಹೊಂಡದ ಬಳಿ ಏಕಾಂಗಿಯಾಗಿ ತೆರಳಿದ್ದಾರೆ. ಆದರೆ ಆಯಾತಪ್ಪಿ ಕೆರೆಗೆ ಬಿದ್ದಿದ್ದಾರೆ. ಸಾಕಷ್ಟು ಸಮಯ ಕಳೆದರೂ ಆಕೆ ಹಿಂತಿರುಗದ ಕಾರಣ, ಕೊಳದೊಳಗೆ ಹುಡುಕಾಡಿದಾಗ ನೀರಿನಡಿಯಲ್ಲಿದ್ದ ದೇಹ ಹೊರ ತೆಗೆದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಕೆಲ ಹೊತ್ತಲ್ಲೇ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತ ಮೈಜೀ ಮಂಗಳೂರಿನ ಪ್ರಶಾಂತನಗರ ನಿವಾಸಿ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ವಿಟ್ಲ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.