ಉತ್ತರ ಪ್ರದೇಶ, ನ 04 (MSP): ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹದಿ ಹರೆಯದ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆಸಿದ ಅಮಾನುಷ ಘಟನೆ ಉತ್ತರ ಪ್ರದೇಶದ ಬರೇಲಿ ಯಲ್ಲಿ ನಡೆದಿದೆ.
16 ರ ಹರೆಯದ ಬಾಲಕಿ 5 ದಿನಗಳ ಹಿಂದೆಯಷ್ಟೇ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇದೇ ಸಂದರ್ಭ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ, ಆಸ್ಪತೆಯ ಸಿಬ್ಬಂದಿ ಹಾಗೂ ಇತರ ನಾಲ್ವರೊಂದಿಗೆ ಸೇರಿ ಗ್ಯಾಂಗ್ ರೇಪ್ ಎಸಗಿದ್ದಾರೆ. ಶನಿವಾರವಷ್ಟೇ ಈಕೆಯನ್ನು ಜನರಲ್ ವಾರ್ಡ್ ಗೆ ಸ್ಥಳಾಂತರಿಸಿದ ಬಳಿಕ ಸಂತ್ರಸ್ಥೆ ಈ ಘಟನೆಯನ್ನು ತನ್ನ ಪೋಷಕರಿಗೆ ವಿವರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಆಸ್ಪತ್ರೆಯ ಸಿಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತರ ನಾಲ್ವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಬಾಲಕಿಗೆ ಹಾವು ಕಚ್ಚಿದ ಹಿನ್ನಲೆಯಲ್ಲಿ ವೆಂಟಿಲೇಟರ್ ಅಳವಡಿಸಿ ಆಕೆಗೆ ಐಸಿಯು ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯುನಲ್ಲಿ ಬಾಲಕಿಯೊಬ್ಬಳೇ ಇದ್ದ ವೇಳೆ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.