ಕುಂದಾಪುರ, ಸೆ 13 (DaijiworldNews/MS) : ಆಡು, ಕುರಿ, ಕೋಳಿ ಸಾಕಾಣಿಕೆ ಸುಲಭ ಆದಾಯದ ಮೂಲಗಳು. ಆಸಕ್ತಿ ಶೃದ್ದೆಯಿದ್ದರೆ ಪಶು ಸಂಗೋಪನೆಯಲ್ಲಿ ಬೇಗ ಯಶಸ್ಸು ಸಾಧಿಸಲು ಸಾಧ್ಯ. ಉಪ ಕಸುಬಾಗಿಯೂ ಕೂಡಾ ಇಂಥಹ ಉಪಕಸುಬುಗಳು ಆರ್ಥಿಕ ಮೂಲವಾಗಬಹುದು. ಆದರೆ ಉಡುಪಿ ಜಿಲ್ಲೆಯಲ್ಲಿ ಮೇಕೆ, ಕುರಿ ಸಾಕಾಣಿಕೆ ಅಷ್ಟೊಂದು ಪ್ರಚಲಿತಕ್ಕೆ ಬಂದಿಲ್ಲ. ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಆಡು ಕುರಿ ಸಾಕಾಣಿಕೆದಾರರಿದ್ದಾರೆ. ಆದರೆ ದೊಡ್ಡ ಮಟ್ಟದಲ್ಲಿ ಇರುವುದು ತೀರಾ ಅಪರೂಪ. ಈ ಪರಿಸರ, ಹವಾಮಾನದಲ್ಲಿ ಮೇಕೆ ಸಾಕಾಣಿಕೆಯಲ್ಲಿ ಯಶಸ್ವಿಯಾಗಬಹುದು ಎನ್ನುವುದಕ್ಕೆ ಅಂಪಾರು ಸಮೀಪದ ಕಂಚಾರು ಅಮ್ಮನವರ ಜೆಡ್ಡು ಆನಂದ ನಾಯ್ಕರು ಕಳೆದ ಎಂಟು ವರ್ಷಗಳಿಂದ ಆಡು ಸಾಕಾಣಿಕೆ ಮಾಡುತ್ತಾ ಬಂದಿರುವುದೇ ಸಾಕ್ಷಿ.
ಆಡು ಸಾಕಾಣಿಕೆಯಲ್ಲಿ ಆನಂದ ನಾಯ್ಕರು ಹಿಡಿತ ಸಾಧಿಸಿದ್ದಾರೆ. ಸ್ಥಳೀಯ ತಳಿಯ 30ಕ್ಕೂ ಹೆಚ್ಚು ಪ್ರಬುದ್ಧ ಆಡುಗಳು ಈಗ ಅವರಲ್ಲಿದೆ. ಹಸಿರು ಮೇವು, ಸಿದ್ಧ ಪೌಷ್ಠಿಕ ಆಹಾರಗಳನ್ನಷ್ಟೇ ಕೊಡುವ ಇವರಿಗೆ ಇದೊಂದು ಹವ್ಯಾಸ. ಈ ಭಾಗದಲ್ಲಿ ವ್ಯವಸ್ಥಿತವಾಗಿ ಆಡು ಸಾಕಾಣಿಕೆ ಕೈಗೊಂಡರೆ ಯಶಸ್ಸು ಸಾಧಿಸಬಹುದು ಎನ್ನುತ್ತಾರೆ.
ಎಂಟು ವರ್ಷಗಳ ಹಿಂದೆ ಔಷಧಿಯ ಉದ್ದೇಶಕ್ಕಾಗಿ ಆಡಿನ ಹಾಲಿಗಾಗಿ ಒಂದು ಆಡನ್ನು ತಂದು ಸಾಕಿದ ಇವರಿಗೆ ಇದರಿಂದಲೇ ಆಡಿನ ಸಂಖ್ಯೆ ಈ ಹಂತಕ್ಕೆ ಬಂದಿದೆ. ಈ ಭಾಗದಲ್ಲಿ ಆಡನ್ನು ರೈತರಿಂದ ಖರೀಧಿಸುವುದು ಕಡಿಮೆ. ಹಾಗಾಗಿ ಸಜೀವ ಆಡುಗಳನ್ನೇ ಮಾರಾಟ ಮಾಡಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಆಡಿನ ಮರಿಗಳನ್ನು ಆಸಕ್ತರಿಗೆ ಮಾರಾಟ ಮಾಡಿದ್ದಾರೆ. ಈಗ ಮಾರುಕಟ್ಟೆಯ ದರದಲ್ಲಿ ಸಜೀವ ಆಡು ಕೆ.ಜಿಗೆ 700 ತನಕ ಬೆಲೆ ಇದೆ. ಆದರೆ ಗ್ರಾಹಕರು ರೈತರಿಂದ ಖರೀಧಿಸುವುದು ಕಡಿಮೆ. ಹಾಗಾಗಿ ಮಾರಾಟ ಸಮಸ್ಯೆ ನಮ್ಮಂತಹ ರೈತರಿಗೆ ಆಗುತ್ತದೆ. ಗ್ರಾಮೀಣ ಪ್ರದೇಶವಾದ್ದರಿಂದ ಸಜೀವ ಆಡುಗಳನ್ನೇ ಮಾರಾಟ ಮಾಡಬೇಕಾಗುತ್ತದೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಆಡು ಸಾಕಾಣಿಕೆ ಮಾಡಲು ಹಿನ್ನೆಡೆಯಾಗುತ್ತದೆ ಎನ್ನುತ್ತಾರೆ ಆನಂದ ನಾಯ್ಕರು.
ಆನಂದ ನಾಯ್ಕರು ಗುಡ್ಡ ಪ್ರದೇಶದಲ್ಲಿ ಆಡುಗಳನ್ನು ಬಿಟ್ಟು ಮೇಯಿಸುತ್ತಾರೆ. ಇದರಿಂದ ಅವುಗಳ ಶಾರೀರಿಕ ಬೆಳವಣಿಗೆ ಉತ್ತಮವಾಗುತ್ತದೆ ಎನ್ನುತಾರೆ. ಆದರೆ ಈ ಸಂದರ್ಭ ಕಾಳಜಿ ಅಗತ್ಯ. ನಾಯಿಗಳು ದಾಳಿ ಮಾಡುವ ಸಾಧ್ಯತೆಗಳು ಇರುತ್ತದೆ. ಇವರಿಗೆ ಆಡು ಸಾಕಾಣಿಕೆಯನ್ನು ದೊಡ್ಡ ಮಟ್ಟದಲ್ಲಿ ಮಾಡುವ ಕನಸಿದ್ದರೂ ಮಾರುಕಟ್ಟೆಯ ಭಯ ಹಾಗೂ ಆರ್ಥಿಕ ಹಿಂಜರಿತ, ಸಂಬಂಧಿತ ಇಲಾಖೆಗಳಿಂದ ಸರಿಯಾದ ಪ್ರೋತ್ಸಾಹ ಸಿಗದಿರುವುದು ಮುಂದುವರಿಯಲು ಆಗಲಿಲ್ಲ ಎನ್ನುತ್ತಾರೆ.
ಇವರ ಪತ್ನಿ ಲೀಲಾವತಿ ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಸ್ವಸಹಾಯ ಸಂಘದ ಸದಸ್ಯೆಯಾಗಿದ್ದು ಯೋಜನೆಯಿಂದ ಮಾರ್ಗದರ್ಶನ ಲಭಿಸಿದೆ. ಆಡು ಸಾಕಾಣಿಕೆಗೆ ರೂ.5 ಸಾವಿರ ಅನುದಾನ ಲಭಿಸಿದೆ.
ಗ್ರಾಮಾಂತರ ಪ್ರದೇಶದಲ್ಲಿ ಸದ್ದಿಲ್ಲದೇ ಪಶುಸಂಗೋಪನೆಯಲ್ಲಿ ನಿರತವಾಗಿರುವವರನ್ನು ಸಂಬಂಧಿತ ಇಲಾಖೆಗಳು ಗುರುತಿಸಿ ಸೂಕ್ತ ಮಾರ್ಗದರ್ಶನ, ವೈಜ್ಞಾನಿಕ ರೀತಿಯಲ್ಲಿ ಮುಂದುವರಿಯುವಂತೆ ಪ್ರೇರೆಪಿಸಿದರೆ ಇನ್ನಷ್ಟು ಇಂಥಹ ರೈತರಿಗೆ ಸ್ಪೂರ್ತಿಯಾಗುತ್ತದೆ.