ಮಂಗಳೂರು ಅ13:ಅಡುಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ತಿಂಗಳು ಕಳೆದರೂ ಕ್ಯಾರೇ ಎನ್ನದ ಅನಿಲ ಪೂರೈಕೆ ಸಂಸ್ಥೆಯ ಬಗ್ಗೆ ಮನನೊಂದ ಗ್ರಾಹಕರೊಬ್ಬರು ನೇರವಾಗಿ ಕೇಂದ್ರ ಇಂಧನ ಸಚಿವರಿಗೆ ಟ್ವೀಟ್ ಮಾಡಿ ಗ್ಯಾಸ್ ಸಿಲಿಂಡರ್ ತರಿಸಿಕೊಂಡ ಘಟನೆ ನಡೆದಿದೆ.
ಮಂಗಳೂರು ನಿವಾಸಿಯಾದ ಕೃಷ್ಣ ರಾಜ್ ಸಾಲ್ಯಾನ್ ಎಂಬವರು ಸುರತ್ಕಲ್ ಸಮೀಪದ ಸಾಲ್ಯಾನ್ ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ನೂತನ ಗ್ಯಾಸ್ ಸಿಲಿಂಡರ್ ಗಾಗಿ ತಿಂಗಳ ಹಿಂದೆ ಬುಕ್ಕಿಂಗ್ ಮಾಡಿದ್ದರು. ಸಾಮಾನ್ಯವಾಗಿ ಬುಕ್ ಮಾಡಿದ ನಂತರ ಒಂದೆರಡು ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಮನೆಗೆ ತಲುಪುವುದು ವಾಡಿಕೆ. ಆದರೆ ಒಂದು ತಿಂಗಳಾದರೂ ಸಿಲಿಂಡರ್ ಮನೆಗೆ ತಲುಪದ ಹಿನ್ನಲೆಯಲ್ಲಿ ಬೇಸತ್ತ ಕೃಷ್ಣ ರಾಜ್ ಕೇಂದ್ರ ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್ ರಲ್ಲಿ ಟ್ವೀಟ್ ಮೂಲಕ ತಮ್ಮ ಅಹವಾಲು ತೋಡಿಕೊಂಡರು.
ಟ್ವೀಟ್ ಗೆ ತಕ್ಶಣ ಸ್ಪಂದಿಸಿದ ಸಚಿವಾಲಯದ ಅಧಿಕಾರಿಗಳು ಕೃಷ್ಣ ರಾಜ್ ರಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ವಿಚಾರಿಸಿದರು. ಸಚಿವಾಲಯದಿಂದ ಬಂದ ಕರೆಗಳಿಂದ ಗಾಬರಿಗೊಂಡ ಏಜೆನ್ಸಿ ಕೆಲ ಕ್ಷಣಗಳಲ್ಲೇ ಕೃಷ್ಣ ರಾಜ್ ಗ್ಯಾಸ್ ಪೂರೈಸಿ ನಿಟ್ಟುಸಿರು ಬಿಟ್ಟಿತು.