ಮಂಗಳೂರು, ಸೆ. 11 (DaijiworldNews/PY): ಈ ವರ್ಷದ ಮೀನುಗಾರಿಕಾ ಋತು ಆರಂಭದಲ್ಲೇ ವಿದೇಶಕ್ಕೆ ರಫ್ತಾಗುವ ಮೀನುಗಳು ಸಾಕಷ್ಟು ಸಿಗುವ ಮುಖೇನ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
ಕಳೆದ ವರ್ಷ ಹಲವಾರು ಕಾರಣಗಳಿಂದ ಮೀನುಗಾರಿಕೆ ಉದ್ಯಮ ಸಂಕಷ್ಟಕ್ಕೊಳಗಾಗಿತ್ತು. ಇದೀಗ ಟ್ರಾಲ್ಬೋಟ್ನವರಿಗೆ ರಾಣಿ ಫಿಶ್ ಸೇರಿದಂತೆ ಕಪ್ಪೆ ಬೊಂಡಾಸ್, ಕೋಲು ಮೀನು ಮುಂತಾದ ಮೀನುಗಳು ಹೇರಳವಾಗಿ ಲಭಿಸಿವೆ. ಪರ್ಶಿಯನ್ ಬೋಟ್ಗಳಿಗೂ ಕೂಡಾ ಉತ್ತಮ ಮೀನುಗಳು ದೊರೆತಿದ್ದು, ಮೀನು ಪ್ರಿಯರಿಗೆ ಹಲವಾರು ಬಗೆಯ ಮೀನುಗಳು ಸಿಗುತ್ತಿವೆ.
ವಿದೇಶಗಳಿಗೆ ರಫ್ತು ಮಾಡುವ ಉದ್ದೇಶದಿಂದ ಕೊಚ್ಚಿ ಸೇರಿದಂತೆ ಗೋವಾ ಹಾಗೂ ಗುಜರಾತ್ಗೆ ಮೀನು ಸಾಗಾಟವಾಗುತ್ತಿದೆ. ಡೀಸೆಲ್ ಸಮಸ್ಯೆ ಬಗೆಹರಿದ ಬಳಿಕ ಶೇ.90ರಷ್ಟು ಬೋಟ್ಗಳು ಮೀನುಗಾರಿಕೆ ಚಟುವಟಿಕೆ ಆರಂಭಿಸಿವೆ. ಎರಡು ವರ್ಷಗಳಿಂದ ಮೀನುಗಾರರು ಸಂಕಷ್ಟದಲ್ಲಿದ್ದರು.
ಆಗಸ್ಟ್ 1ರಂದು ಮೀನುಗಾರಿಕೆ ಋತು ಆರಂಭವಾಗಬೇಕಿತ್ತು. ಆದರೆ, ಡೀಸೆಲ್ ಸಬ್ಸಿಡಿ ಪಾಸ್ಬುಕ್ ಸಿಗುವಾಗ ವಿಳಂಬವಾಗಿದ್ದ ಕಾರಣ, ಹೆಚ್ಚಿನ ಬೋಟ್ಗಳು ಆಗಸ್ಟ್ 15ರ ಬಳಿಕ ಮೀನುಗಾರಿಕೆಯಲ್ಲಿ ತೊಡಗಿವೆ.
ಸದ್ಯ ಸಮುದ್ರ ಶಾಂತವಾಗಿರುವುದರಿಂದ ಆಳ ಸಮುದ್ರದಲ್ಲಿ ಉತ್ತಮ ರೀತಿಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಇದರೊಂದಿಗೆ ಮಂಜುಗಡ್ಡೆ ಅಂಗಡಿ, ಹೊಟೇಲ್, ಫಿಶ್ ಕಟ್ಟಿಂಗ್, ಟ್ರಾನ್ಸ್ಪೋರ್ಟ್ ಹಾಗೂ ಎಲ್ಲಾ ಉದ್ಯಮಗಳು ನಡೆಯುತ್ತಿವೆ. ಕಾರ್ಮಿಕರಿಗೂ ಕೂಡಾ ಉತ್ತಮ ಸಂಬಳ ಸಿಗುತ್ತಿದ್ದು, ಟೆಂಪೋ, ಬೈಕ್ಗಳಲ್ಲಿ ಮನೆ ಮನೆಗೆ ಕೊಂಡೊಯ್ದು ಮೀನು ಮಾರುವವರಿಗೆ ಹಾಗೂ ಮಾರುಕಟ್ಟೆಗಳಲ್ಲಿ ಮೀನು ಮಾರುವ ಮಹಿಳೆಯರಿಗೆ ಉತ್ತಮ ರೀತಿಯಲ್ಲಿ ವ್ಯಾಪಾರವಾಗುತ್ತಿದೆ.