ಬೆಂಗಳೂರು, ನ03(SS): ಉಪ ಚುನಾವಣೆಗೆ ಮತದಾನ ಆರಂಭವಾಗಿದ್ದು, ಕಣದಲ್ಲಿ ಒಟ್ಟು 31 ಅಭ್ಯರ್ಥಿಗಳಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಗೆ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಮಹತ್ವ ಪಡೆದುಕೊಂಡಿದೆ.
ಈ ಉಪಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕ ಶ್ರೀರಾಮುಲುಗೆ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ದೊಡ್ಡ ಸವಾಲು ಎದುರಾಗಿದ್ದರೆ, ಬಿಜೆಪಿ ಮಣಿಸಲು ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಸರ್ವ ಕಸರತ್ತು ನಡೆಸಿದೆ. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಒಂದು ವೇಳೆ ಮೈತ್ರಿಕೂಟ ಗೆಲುವು ಸಾಧಿಸಿದರೆ ಮುಂದಿನ ಮಹಾಚುನಾವಣೆಯಲ್ಲಿ ಬಿಜೆಪಿಗೆ ಆತಂಕ ಖಾತರಿ. ಶಿವಮೊಗ್ಗ, ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ ರಾಜ್ಯದ ಜನ ಮೈತ್ರಿಕೂಟವನ್ನು ತಿರಸ್ಕರಿಸಿ ಬಿಜೆಪಿಯ ಪರ ನಿಂತಿದ್ದಾರೆ ಎಂಬ ಸಂದೇಶ ಹೊರಬೀಳಲಿದೆ.
ಮೈತ್ರಿಕೂಟ ವಿಫಲಗೊಂಡರೆ ಕಾಂಗ್ರೆಸ್ ಮುಂದೆ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಯೋಚಿಸಬಹುದು. ಹೀಗಾಗಿ ಈ ಉಪ ಚುನಾವಣೆಯು ಮುಂದಿನ ಚುನಾವಣೆ ಮೇಲೆ ಹಲವು ರೀತಿಯ ಪರಿಣಾಮ ಉಂಟು ಮಾಡಲಿರುವುದರಿಂದ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ಅಗ್ನಿಪರೀಕ್ಷೆಯಾಗಿದೆ.