ಮಂಗಳೂರು, ನ 02(SM): ಬೆಂಜನಪದವು ಎಂಬಲ್ಲಿ ನಡೆದ ಎಸ್ ಡಿಪಿಐ ಮುಖಂಡ ಅಶ್ರಫ್ ಕಲಾಯಿ ಬರ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೊಬ್ಬನಿಗೆ 16 ತಿಂಗಳ ಬಳಿಕ ಹೈಕೋರ್ಟ್ ಜಾಮೀನು ನೀಡಿದೆ.
ಹತ್ಯೆಯಾದ ಅಶ್ರಫ್ ಕಲಾಯಿ
ಆರೋಪಿ ಭರತ್ ಕುಮ್ಡೇಲ್
ಎಸ್ ಡಿ ಪಿಐ ಮುಖಂಡನಾಗಿದ್ದ ಅಶ್ರಫ್ ಕಲಾಯಿಯನ್ನು ಬೆಂಜನಪದವು ಎಂಬಲ್ಲಿ 2017ರ ಜೂನ್ 21ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಜರಂಗದಳದ ಪುತ್ತೂರು ಸಹಸಂಚಾಲಕ ಭರತ್ ಕುಮ್ಡೇಲ್ ಪ್ರಮುಖ ಆರೋಪಿಯಾಗಿದ್ದ.
ಘಟನೆಗೆ ಸಂಬಂಧಿಸಿ ಭರತ್ ಸೇರಿ ಹಲವರನ್ನು ಬಂಧಿಸಲಾಗಿತ್ತು. ಆದರೆ ಕಳೆದ 16 ತಿಂಗಳುಗಳಿಂದ ಪ್ರಮುಖ ಆರೋಪಿ ಭರತ್ ಗೆ ಜಾಮೀನು ಲಭಿಸಿರಲಿಲ್ಲ. ಜಾಮೀನಿಗಾಗಿ ಭರತ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ ಸುಮಾರು ೧೬ ತಿಂಗಳ ಬಳಿಕ ಇದೀಗ ಹೈಕೋರ್ಟ್ ಆರೋಪಿಗೆ ಜಾಮೀನು ನೀಡಿದೆ.
2014 ರಲ್ಲಿ ನಡೆದ ಬಜರಂಗದಳ ಕಾರ್ಯಕರ್ತರ ರಾಜೇಶ್ ಪೂಜಾರಿ ಹತ್ಯೆಗೆ ಪ್ರತಿಕಾರವಾಗಿ ಎಸ್ ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆಯಾಗಿತ್ತು ಎಂದು ಹೇಳಲಾಗಿತ್ತು. ಅಶ್ರಫ್ ಹತ್ಯೆ ಬಳಿಕ ಜಿಲ್ಲೆಯಲ್ಲಿ ಕೋಮು ಸಂಘರ್ಷ ಕದಡಿ 144 ಸೆಕ್ಷನ್ ಮೂಲಕ ನಿರಂತರ ನಿಷೇಧಾಜ್ಞೆ ಜಾರಿಯಲ್ಲಿತ್ತು.
ಆರೋಪಿ ಭರತ್ ಪರವಾಗಿ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದ್ದರು. ಇನ್ನು ಆರೋಪಿಗಳಾದ ಅಭಿನ್, ಶಿವಪ್ರಸಾದ್ ಮತ್ತು ದಿವ್ಯರಾಜ್ ಗೆ ಜಾಮೀನು ಲಭ್ಯವಾಗಿಲ್ಲ.