ಕಡಬ, ನ 02(SM): ಎಟಿಎಂ ಕಾರ್ಡ್ ನಿಷ್ಕ್ರಿಯಗೊಂಡಿದೆ ಎಂದು ನಂಬಿಸಿದ ವಂಚಕರು ಕಡಬದ ವ್ಯಕ್ತಿಯೋರ್ವರಿಂದ 49,997 ರೂ.ಗಳನ್ನು ದೋಚಿರುವ ಘಟನೆ ಅಕ್ಟೋಬರ್ 29ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಡಬದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಪಿಜಕ್ಕಳ ನಿವಾಸಿ ರವೀಂದ್ರ ಎಂಬವರು ವಂಚನೆಗೊಳಗಾದವರು. ರವೀಂದ್ರ ಅವರ, ಮೊಬೈಲಿಗೆ ಅಕ್ಟೋಬರ್ 29ರಂದು ಕರೆಯೊಂದು ಬಂದಿದ್ದು, ಕರೆ ಮಾಡಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತು ಆರಂಭಿಸಿದ್ದ.
ಆ ವ್ಯಕ್ತಿಯು ನಿಮ್ಮ ಎಟಿಎಂ ಕಾರ್ಡ್ ನ ಅವಧಿ ಮುಗಿದಿರುವುದರಿಂದ ತಕ್ಷಣವೇ ಕಾರ್ಡ್ ಸಂಖ್ಯೆಯನ್ನು ತಿಳಿಸಿದರೆ ಪೋಸ್ಟ್ ಮುಖಾಂತರ ನಿಮ್ಮ ವಿಳಾಸಕ್ಕೆ ನೂತನ ಕಾರ್ಡ್ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾನೆ. ಆದರೆ ಇದಕ್ಕೆ ರವೀಂದ್ರ ಅವರು ಸೊಪ್ಪು ಹಾಕಿಲ್ಲ. ಮತ್ತೆ ಮೋಸಗಾರ ಬಲವಾದ ಸುಳ್ಳು ಹೇಳಿದ್ದು, ತಕ್ಷಣವೇ ಸಂಖ್ಯೆಯನ್ನು ನೀಡದಿದ್ದಲ್ಲಿ ಕಳ್ಳರು ಖಾತೆಗೆ ಕನ್ನ ಹಾಕುವ ಸಂಭವವಿದೆ ಎಂದು ನಂಬಿಸಿದ್ದಾನೆ.
ಇದರಿಂದಾಗಿ ಭಯಭೀತರಾದ ರವೀಂದ್ರ, ಆ ವ್ಯಕ್ತಿಗೆ ಕಾರ್ಡ್ ಸಂಖ್ಯೆಯನ್ನು ನೀಡಿದ್ದಲ್ಲದೆ, ಒಟಿಪಿ ಸಂಖ್ಯೆಯನ್ನೂ ಕೂಡ ನೀಡಿದ್ದಾರೆ. ಆದರೆ, ಆ ಆಸಾಮಿ ನಿಮಿಷಗಳೊಳಗೆ ರವೀಂದ್ರ ಅವರ ಖಾತೆಯಿಂದ ಎರಡು ಬಾರಿ 19,999 ರೂ.ಗಳನ್ನು ಹಾಗೂ ಮತ್ತೊಮ್ಮೆ 9,999 ರೂಪಾಯಿಗಳನ್ನು ದೋಚಿದ್ದು, ಬೇರೆ ಖಾತೆಗೆ ವರ್ಗಾಯಿಸಿದ್ದಾನೆ.
ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ, ಅದಾಗಲೇ ರವೀಂದ್ರ ಅವರಿಗೆ ತನ್ನ ತಪ್ಪಿನ ಅರಿವಾಗಿದ್ದು, ಮೋಸಹೋಗಿರುವುದು ತಿಳಿದಿದೆ. ತಕ್ಷಣವೇ ರವೀಂದ್ರ ಬ್ಯಾಂಕ್ ಗೆ ತೆರಳಿ ತನ್ನ ಖಾತೆಯಲ್ಲಿನ ವ್ಯವಹಾರವನ್ನು ಸ್ಥಗಿತಗೊಳಿಸಿದ್ದಾರೆ. ಆ ಮೂಲಕ ಮತ್ತಷ್ಟು ಹಣ ಕಳೆದು ಕೊಳ್ಳುವುದನ್ನು ತಪ್ಪಿಸಿದ್ದಾರೆ.
ಇತ್ತ ತಾನು ಎಟಿಎಂ ಕಾರ್ಡ್ ಸಂಖ್ಯೆಯನ್ನು ನೀಡಿ ಮೋಸಹೋಗಿದ್ದರಿಂದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.