ಕಾರ್ಕಳ, ಸೆ. 07 (DaijiworldNews/PY): ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2021ರ ಸಾಲಿನ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಸರಸ್ವತಿ ಬಲ್ಲಾಳ್ ಮತ್ತು ಡಾ.ಸಿ.ಕೆ.ಬಲ್ಲಾಳ್ ದಂಪತಿ ಪ್ರತಿಷ್ಠಾನದಿಂದ ನೀಡುವ ಕರ್ನಾಟಕದ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿಯನ್ನು ನಿವೃತ್ತ ಪ್ರಾಧ್ಯಾಪಕ ಮತ್ತು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ ಅವರಿಗೆ ನೀಡುವುದೆಂದು ತೀರ್ಮಾನಿಸಲಾಯಿತು.
ಮೊಗಸಾಲೆ ಪ್ರತಿಷ್ಠಾನವು ನೀಡುವ ಕಾಂತಾವರ ಸಾಹಿತ್ಯ ಪುರಸ್ಕಾರವನ್ನು ನಿವೃತ್ತ ಪ್ರಾಧ್ಯಾಪಕ ಮತ್ತು ಹಿರಿಯ ಸಾಹಿತಿ ಉದಯ ಕುಮಾರ್ ಹಬ್ಬು ಅವರಿಗೆ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಕಾಂತಾವರ ಸರೋಜಿನಿ ನಾಗಪ್ಪಯ್ಯ ಈಶ್ವರಮಂಗಲ ದಂಪತಿ ಪ್ರತಿಷ್ಠಾನದಿಂದ ನೀಡುವ ಮಾಧ್ಯಮ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ಲೇಖಕ ಕೋಟ ಶಿವಾನಂದ ಕಾರಂತರಿಗೆ ನೀಡುವುದೆಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿಯ ಅವರು ತಿಳಿಸಿದ್ದಾರೆ.
ಪ್ರಶಸ್ತಿಯು ತಲಾ 10,000 ರೂ. ಗಳ ಗೌರವ ಸಂಭಾವನೆ, ತಾಮ್ರ ಪತ್ರ ಮತ್ತು ಸನ್ಮಾನಗಳನ್ನು ಒಳಗೊಂಡಿದ್ದು ಇದೇ ಸೆಪ್ಟಂಬರ್ ತಿಂಗಳಲ್ಲಿ ಕರ್ನಾಟಕ ಸರ್ಕಾರದ ಇಂಧನ ಮತ್ತು ಕನ್ನಡ ಮತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರ ಅನುಕೂಲತೆಯ ದಿನದಲ್ಲಿ ಕಾಂತಾವರದಲ್ಲಿ ಪ್ರದಾನಿಸಲಾಗುವುದು ಮತ್ತು ಈ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.