ಮುಂಬೈ,ನ 02 (MSP): ಆರೆಸ್ಸೆಸ್ ನ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾದ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸಿಕ್ರೇಟ್ ಮೀಟಿಂಗ್ ನಡೆಸಿದ್ದಾರೆ. ಆದ್ರೆ ಈ ಸಿಕ್ರೇಟ್ ಮೀಟಿಂಗ್ ನಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆಂದು ಎನ್ನುವುದು ಬಲ್ಲ ಮೂಲಗಳ ಮಾಹಿತಿಯಾಗಿದೆ. ಇನ್ನೊಂದೆಡೆ ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗ ಆರ್'ಎಸ್ಎಸ್ ನ ಮುಖಂಡನ ಜೊತೆಗಿನ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.
ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಾ ಮತ್ತು ಭಾಗವತ್ ಕಾರ್ಯಕ್ರಮದ ಬಳಿಕ, ಖಾಸಗಿಯಾಗಿ ಭೇಟಿಯಾದ ಇಬ್ಬರು ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಇದಲ್ಲದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಲವು ಮುಖಂಡರನ್ನು ಭೇಟಿ ಮಾಡಿ ಮಹತ್ವದ ವಿಚಾರಗಳನ್ನು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಸರ್ವೋಚ್ಚ ನ್ಯಾಯಾಲಯ, ಶೀಘ್ರದಲ್ಲಿ ವಿಚಾರಣೆ ನಡೆಸಲು ನಿರಾಕರಿಸಿರುವುದು ಮತ್ತು ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ಎಲ್ಲಾ ವಯಸ್ಸಿನ ಮಹಿಳೆಯರ ಭೇಟಿಗೆ ಅವಕಾಶ ನೀಡಿರುವುದು ಈ ವಿಚಾರವಾಗಿ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.
ರಾಮ ಮಂದಿರ ನಿರ್ಮಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಗ್ರಹಿಸುತ್ತಿದ್ದು, ಭೇಟಿ ವೇಳೆ ಅಮಿತ್ ಶಾ ಹಾಗೂ ಭಾಗವತ್ ಇಬ್ಬರೂ ಈ ಕುರಿತು ಮಾತುಕತೆ ನಡೆಸಿರುವ ಸಾಧ್ಯತೆಗಳಿವೆ.