ಮಂಗಳೂರು, ನ 02 (MSP) : ಆಕೆಗೆ ಜೀವನದಲ್ಲಿ ಅಧಮ್ಯ ಉತ್ಸಾಹವಿತ್ತು, ಅದರೆ ವಿಧಿಯಾಟ ಬೇರೆಯೇ ಬಗೆದಿತ್ತು. ಸಾವು ಆಕೆಯನ್ನು ಅಪ್ಪಿಕೊಂಡಿತ್ತು. ತಾನು ಬದುಕುವುದಿಲ್ಲ ಎಂದು ಖಚಿತವಾದ ಮೇಲೆ ಆಕೆ ತೆಗೆದುಕೊಂಡ ನಿರ್ಧಾರ ನಿಜಕ್ಕೂ ಸಾರ್ಥಕತೆಯ ಭಾವ ಮೂಡುವಂತದ್ದು..
ಅಶೋಕನಗರದ ನಿವಾಸಿ ಕುಮಾರಸ್ವಾಮಿ ಕೊಕ್ಕಡ ಮತ್ತು ವಂದನಾ ಕುಮಾರಸ್ವಾಮಿ ಯವರ ಮುದ್ದಿನ ಸುಪುತ್ರಿ ಕುಮಾರಿ ಪ್ರತೀಕ್ಷಾ (16)ಶಾರದಾ ವಿದ್ಯಾಲಯದಲ್ಲಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ. ಆದರೆ ಆಕೆಯನ್ನು ಕ್ಯಾನ್ಸರ್ ಬಾಧಿಸತೊಡಗಿತು.ಈ ಮಧ್ಯೆ ತಾನು ಈ ಕಾಯಿಲೆಯಿಂದ ಬದುಕುಳಿಯುವುದು ಅಸಾಧ್ಯವೆಂಬುದನ್ನು ಅರಿತ ಆ ಮುಗ್ಧ ಬಾಲೆ ಆಸ್ಪತ್ರೆಯಲ್ಲಿ ತನ್ನ ತಾಯಿಯನ್ನು ಹತ್ತಿರ ಕರೆದು, ಅಮ್ಮಾ.. ಒಂದು ವೇಳೆ ನನ್ನ ಆತ್ಮ ದೇವರಿಗೆ ಪ್ರಿಯವಾದರೆ, ನನ್ನ ಅಂತ್ಯಸಂಸ್ಕಾರ ಮಾಡದೆ ನನ್ನ ದೇಹವನ್ನು ಆಸ್ಪತ್ರೆಗೆ ದಾನ ಮಾಡಿ ಎಂದು ನಿವೇದಿಸಿಕೊಂಡದ್ದಳು.
ಅದರೆ ಬದುಕಬೇಕೆನ್ನುವ ಆಸೆ ಕೈಗೂಡಲಿಲ್ಲ.. ಮಗಳಿಲ್ಲವಾದ ಮೇಲೆ ಮಗಳ ಕೊನೆಯಾಸೆಯಾದರೂ ನೆರೆವೇರಲಿ ಎಂದು ಬ್ರಾಹ್ಮಣ ಸಂಪ್ರದಾಯಸ್ಥರಾದರೂ ಆಕೆಯ ಪೋಷಕರು ಗುರುವಾರದಂದು ಮಗಳ ಇಚ್ಚೆಯಂತೆಯೇ ದೇಹದಾನ ಮಾಡಿದರು. ದೇಹದಾನ ಅಂಗಾಂಗ ದಾನಗಳ ಕುರಿತು ಜನರಲ್ಲಿ ಸಾಕಷ್ಟು ಅರಿವು ಮೂಡಿಸಬೇಕಾದ ದಿನಗಳಲ್ಲಿ ತಾನೇ ತನ್ನ ದೇಹವನ್ನು ದಾನ ಮಾಡಿ ಮಾದರಿಯಾಗಿದ್ದಾಳೆ.
ಕುಮಾರಸ್ವಾಮಿ ಮತ್ತು ವಂದನಾ ದಂಪತಿಗೆ ಮೂವರು ಮಕ್ಕಳು. ಹಿರಿಯ ಪುತ್ರನ ಬಳಿಕ ಅವರಿಗೆ ಜನನವಾಗಿದ್ದು ಪ್ರತೀಕ್ಷಾ ಮತ್ತು ಪ್ರೀತಂ ಎನ್ನುವ ಅವಳಿ ಮಕ್ಕಳು.. ಇಬ್ಬರೂ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯದಲ್ಲಿ ಅಭ್ಯಾಸಿಸುತ್ತಿದ್ದರು. ಪ್ರತೀಕ್ಷಾ ಗಳಿಗೆ ೬ ನೇ ತರಗತಿ ಓದುತ್ತಿದ್ದಾಗ ಎಲುಬಿನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಎರಡು ವರ್ಷಗಳ ಚಿಕಿತ್ಸೆಯ ಬಳಿಕ ಆಕೆ ಗುಣಮುಖರಾಗಿದ್ದರು. ಆದರೆ ಒಂದೇ ವರ್ಷದಲ್ಲಿ ಮತ್ತೆ ಕ್ಯಾನ್ಸರ್ ಬೆನ್ನುಹತ್ತಿತ್ತು. ಅದರೂ ಎದೆಗುಂದದ ಆಕೆ ಚಿಕಿತ್ಸೆ ಪಡೆಯುತ್ತಲೇ ಓದು ಮುಂದುವರಿಸಿದರು. ಆದರೆ ೫ ವರ್ಷದ ಚಿಕಿತ್ಸೆ ಪಡೆದ ಬಳಿಕವೂ ಆಕೆ ಅ.31 ರ ಬುಧವಾರ ಮೃತಪಟ್ಟಳು. ಓದು ಸಂಗೀತ, ಭರತನಾಟ್ಯ, ಯಕ್ಷಗಾನದಲ್ಲಿ ಮುಂದಿದ್ದ ಆಕೆಗೆ ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಇದಕ್ಕೆ ಪೂರಕವಾಗಿ ವಿಜ್ಞಾನ ಆಕೆಯ ಆಸಕ್ತಿಯ ಕ್ಷೇತ್ರವಾಗಿತ್ತು. ಹೀಗಾಗಿಯೇ ಆಕೆ ದೇಹದಾನದ ಇಚ್ಚೆ ವ್ಯಕ್ತಪಡಿಸಿರಬಹುದು ಎನ್ನುವುದು ಆಕೆಯ ಹೆತ್ತವರ ಅಭಿಪ್ರಾಯ.
ಪ್ರತೀಕ್ಷಾ 20 ದಿನಗಳ ಹಿಂದೆ ತಾನು ಸತ್ತರೆ ದೇಹವನ್ನು ಕೆಎಂಸಿ ಗೆ ದಾನ ಮಾಡಬೇಕೆಂದು ತಾಯಿ ಬಳಿ ವಿನಂತಿ ಮಾಡಿಕೊಂಡಿದ್ದಳು. ಅದರಂತೆ ಗುರುವಾರ ಆಕೆಯ ದೇಹವನ್ನು ಹಸ್ತಾಂತರಿಸಲಾಯಿತು.