ಉಡುಪಿ, ನ 01(SM): ಮರಳು ಹೋರಾಟ ಸಮಿತಿಯಿಂದ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ 8ನೇ ದಿನವೂ ಮುಂದುವರೆದಿತ್ತು. ಧರಣಿಯ ಫಲಶ್ರುತಿಯಾಗಿ ಇಂದು ರಾಜ್ಯದ ಗಣಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯರವರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಸುಮಾರು 4 ಗಂಟೆಗಳ ಸುದೀರ್ಘ ಚರ್ಚೆ ನಡೆಸಿದರು. ಅವರ ಭರವಸೆಯ ಮೇರೆಗೆ ಹೋರಾಟಗಾರರು ತಮ್ಮ ಧರಣಿಯನ್ನು ಕೈಬಿಟ್ಟಿದ್ದಾರೆ. ಹಾಗೂ ನವಂಬರ್ 10ರಂದು ಉಡುಪಿ ಜಿಲ್ಲೆ ಬಂದ್ ಗೆ ನೀಡಿದ್ದ ಕರೆಯನ್ನು ಹಿಂಪಡೆದುಕೊಂಡಿದ್ದಾರೆ.
ರಾಜ್ಯದ ಗಣಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯರವರು ಹೋರಾಟಗಾರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಇದರಲ್ಲಿ non CRZ ಗೆ ಸಂಬಂಧಿಸಿದಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೇ CRZ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಸಂಬಂಧಿಸಿದಂತೆ, ಕೇಂದ್ರಕ್ಕೆ ಪತ್ರ ಬರೆಯಲಾಗಿದ್ದು, ಕೇಂದ್ರದ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ. ಹೀಗಾಗಿ ಸಮಯಾವಕಾಶಬೇಕು ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ಶಾಸಕರು ಹಾಗೂ ಸಂಸದರ ನಿಯೋಗ ದೆಹಲಿಗೆ ತೆರಳುವಂತಹ ಸಂದರ್ಭದಲ್ಲಿ ಆ ನಿಯೋಗದ ಜೊತೆ ತಾನು ತೆರಳುವುದಾಗಿ ಕಠಾರಿಯ ಭರವಸೆ ನೀಡಿದ್ದಾರೆ. ಹಾಗೂ ಆದೇಶವನ್ನು ಪರಿಷ್ಕೃತಗೊಳಿಸಲು ಪ್ರಯತ್ನವನ್ನು ಮಾಡುತ್ತೇನೆ ಎಂಬ ತಿಳಿಸಿದ್ದಾರೆ.
ಎಲ್ಲಾ 171 ಜನರಿಗೂ ಪರವಾನಿಗೆ ಸಿಗುವ ರೀತಿಯಲ್ಲಿ ಕೇಂದ್ರ ಸರ್ಕಾರದಿಂದ ಬದಲಾವಣೆಗಳನ್ನು ತರುವ ಪ್ರಯತ್ನವನ್ನು ಮಾಡುತ್ತೇನೆ. ಅಲ್ಲಿಯ ತನಕ ಪ್ರತಿಭಟನೆಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಪ್ರತಿಭಟನೆಯ ತೀವ್ರತೆ ಹೆಚ್ಚಾದರೆ ಕಾನೂನನ್ನು ಬದಲಾವಣೆ ಮಾಡಲು ತೊಂದರೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಠಾರಿಯ ಅವರ ಮನವಿ ಮೇರೆಗೆ ಪ್ರತಿಭಟನಾಕಾರರು ಚರ್ಚೆ ನಡೆಸಿ ನವೆಂಬರ್ 20ರ ವರೆಗೆ ಪ್ರತಿಭಟನೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ. ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯಾವ ರೀತಿಯ ಬದಲಾವಣೆ ಬರುತ್ತದೆ ಎಂಬುವುದನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.