ಉಡುಪಿ, ನ 01(SM): ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆ ತೀವ್ರಗೊಂಡಿದ್ದು, ಇದರ ವಿರುದ್ಧ ೮ನೇ ದಿನವೂ ಧರಣಿ ಮುಂದುವರೆದಿದೆ. ೮ನೇ ದಿನವಾದ ಗುರುವಾರದಂದು ಜಿಲ್ಲಾ ಮರಳು ಹೋರಾಟ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿರುವ ಅನಿದಿಷ್ಟಾವಧಿ ಅಹೋರಾತ್ರಿ ಧರಣಿಯ ಎಂಟನೇ ದಿನವಾದ ಗುರುವಾರ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
‘ಅತಿಯಾದ ಮರಳುಗಾರಿಕೆ ಹಾಗೂ ಮರಳುಗಾರಿಕೆಗೆ ಪೂರ್ಣ ನಿಷೇಧ ಹೇರುವುದು ಪರಿಸರ ಹಾನಿಕರವಾಗಿದೆ. ಆದುದರಿಂದ ಸರಕಾರ ಯೋಗ್ಯವಾದ ನಿಯಂತ್ರಣದೊಂದಿಗೆ ಮರಳುಗಾರಿಕೆಗೆ ಅವಕಾಶ ಕಲ್ಪಿಸಬೇಕು. ಮರಳಿನ ಸಮಸ್ಯೆ ನ.10 ರೊಳಗೆ ಪರಿಹರಿಸದಿದ್ದರೆ ನಾನು ಉಪವಾಸ ಸತ್ಯಾಗ್ರಹ ಮಾಡಲಿದ್ದೇನೆ. ನ. ೧೦ರಂದು ಉದುಪಿ ಜಿಲ್ಲೆಯಲ್ಲಿ ಕರೆ ಕೊಟ್ಟಿರುವ ಬಂದ್ ಗೆ ನಾನು ಬೆಂಬಲ ಸೂಚಿಸುತ್ತೇನೆ ಎಂದು ಪೇಜಾವರ ಸ್ವಾಮೀಜಿಗಳು ಪ್ರತಿಕ್ರಿಯಿಸಿದ್ದಾರೆ.
ಈ ಹೋರಾಟ ಸುಖಾಂತ್ಯ ಕಾಣುವಂತೆ ಪೇಜಾವರ ಸ್ವಾಮೀಜಿ ಧರಣಿಯಲ್ಲಿ 10 ನಿಮಿಷಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್, ಮರಳು ದೋಣಿ ಕಾರ್ಮಿಕ ಸಂಘದ ಅಧ್ಯಕ್ಷ ಸುಧಾಕರ್ ಅಮೀನ್, ಲಾರಿ ಚಾಲಕ ಹಾಗೂ ಮಾಲಕರ ಸಂಘದ ರಾಘವೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.