ಬೆಳ್ತಂಗಡಿ, ನ 01(SM): ಕಾಡಾನೆಯೊಂದು ತೋಟಕ್ಕೆ ಬಂದು ಭೀತಿ ಹುಟ್ಟಿಸಿದ ಘಟನೆ ಗುರುವಾರ ಸಂಜೆ ತಾಲೂಕಿನ ಇಂದಬೆಟ್ಟು ಎಂಬಲ್ಲಿ ನಡೆದಿದೆ. ಬೃಹದಾಕಾರದ ಒಂಟಿ ಸಲಗವು ಇಂದಬೆಟ್ಟು ಚರ್ಚ್ನ ಹಿಂಬದಿ ಎಪಿಎಂಸಿಯ ಮಾಜಿ ಅಧ್ಯಕ್ಷ ಹನಿಬೆಟ್ಟು ಭರತ್ ಕುಮಾರ್ಎಂಬವರ ತೋಟಕ್ಕೆ ಸಂಜೆ ೫ ಗಂಟೆ ವೇಳೆಗೆ ಆಗಮಿಸಿದೆ.
ಅಕ್ಕಪಕ್ಕದ ಮನೆಯ ನಾಯಿಗಳು ಬೊಗಳುವುದನ್ನು ಗಮನಿಸಿದ ಸ್ಥಳೀಯರು ತೋಟಕ್ಕೆ ತೆರಳಿ ನೋಡಿದಾಗ, ತೋಟದಲ್ಲಿ ಆನೆ ಇರುವುದು ಗೊತ್ತಾಗಿದೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕಕ್ಕೀಡಾಗಿದ್ದಾರೆ. ಆನೆ ಕೆಲವೇ ಕ್ಷಣದಲ್ಲಿ ತೋಟದಿಂದ ಹೊರ ನಡೆದಿದೆ. ಆದರೆ, ತೋಟಕ್ಕೆ ಯಾವುದೇ ಹಾನಿಯನ್ನುಂಟು ಮಾಡಿಲ್ಲ.
ಆನೆ ಪ್ರತ್ಯಕ್ಷವಾಗಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದನ್ನು ಕಾಡಿಗೆ ಓಡಿಸಲು ಕಾನರ್ಪ ಎಂಬಲ್ಲಿನ ಹೊಳೆ ಬದಿ ಅರಣ್ಯ ಇಲಾಖೆಯವರು ಕಾದುಕೂತಿದ್ದರು. ರಾತ್ರಿ ವೇಳೆಯವರೆಗೂ ಒಂಟಿ ಸಲಗ ಗೋಚರಿಸದೇ ಇರುವುದರಿಂದ ಬಹುತೇಕ ಅದು ನದಿ ದಾಟಿ ಬಂಡಾಜೆ ಕಾಡಿಗೆ ತೆರಳಿರಬಹುದುದೆಂದು ಅಂದಾಜಿಸಲಾಗಿದೆ.