ಹೈದರಾಬಾದ್,ನ 01 (MSP): ಈತನ ವಯಸ್ಸು ಕೇವಲ 11 ವರ್ಷ. ಹೆಸರು ಮಹಮ್ಮದ್ ಹಸನ್ ಅಲಿ. ಏಳನೇ ತರಗತಿ ವಿದ್ಯಾರ್ಥಿ..! ಆದರೆ ಈತ ಮಾಡುತ್ತಿರುವ ಕೆಲಸ ಮಾತ್ರ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥದ್ದು. ಹೈದರಾಬಾದ್ ನ 11 ವರ್ಷದ ಬಾಲಕನೊಬ್ಬ ಎಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾನೆ ಅದು ಉಚಿತವಾಗಿ..!
ಮಹಮ್ಮದ್ ಹಸನ್ ಪ್ರತಿದಿನ ತನ್ನ ಶಾಲೆಯ ಹೋಮ್ ವರ್ಕ್ ಇತ್ಯಾದಿಗಳನ್ನು ಮುಗಿಸಿಕೊಂಡ ಬಳಿಕ ಸಂಜೆ 6 ಗಂಟೆಯ ವೇಳೆಗೆ ಎಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪಾಠ ತೆರಳುತ್ತಾನೆ. ಈ ಬಗ್ಗೆ ಅಲಿಯನ್ನೇ ಕೇಳಿದ್ರೆ ಆತ, ನಾನು ಕಳೆದೊಂದು ವರ್ಷದಿಂದ ಟೀಚಿಂಗ್ ನಲ್ಲಿ ತೊಡಗಿದ್ದೇನೆ. ಬೆಳಿಗ್ಗೆ ಶಾಲೆಗೆ ಹೋಗಿ 3 ಗಂಟೆ ವೇಳೆಗೆ ಮನೆಗೆ ಹಿಂತಿರುಗುತ್ತೇನೆ ಬಳಿಕ ನನ್ನ ಪಾಠ ಮತ್ತು ಆಟ ಹಾಗೂ ದಿನನಿತ್ಯ ಚಟುವಟಿಕೆಗಳನ್ನು ಮುಗಿಸಿ ಸಂಜೆ ತರಬೇತಿ ಕೇಂದ್ರಕ್ಕೆ ಹೋಗಿ ಸಿವಿಲ್, ಮೆಕಾನಿಕಲ್, ಎಲೆಕ್ಟ್ರೀಕಲ್ ವಿದ್ಯಾರ್ಥಿಗಳಿಗೆ ಬೋಧಿಸುತ್ತೇನೆ ಎನ್ನುತ್ತಾನೆ. ಇದಲ್ಲದೆ ಈತನಿಗೆ 2020ರ ವೇಳೆಗೆ 1000 ವಿದ್ಯಾರ್ಥಿಗಳಿಗೆ ಬೋಧಿಸುವ ಗುರಿ ಇದೆ.
ನಮ್ಮ ದೇಶದಲ್ಲಿ ಎಷ್ಟೋ ವಿದ್ಯಾರ್ಥಿಗಳು ಎಂಜಿನಿಯರ್ ಅಭ್ಯಾಸಿಸಿದ್ದರೂ, ವಿದೇಶದಲ್ಲಿ ತಾವು ಅಭ್ಯಾಸಿಸಿರುವುದನ್ನು ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವುದನ್ನು ಇಂಟರ್ ನೆಟ್ ನಲ್ಲಿ ನೋಡಿ ಅರಿತುಕೊಂಡೆ. ಆಗ ಎಂಜಿನಿಯರ್ ಯಾವ ಕೊರತೆ ಇದೆ ಎನ್ನುವುದು ನನಗೆ ಮನವರಿಕೆ ಆಯಿತು. ಬಳಿಕ ತಂತ್ರಜ್ಞಾನ ಹಾಗೂ ಸಂವಹನ ಕೌಶಲ್ಯದ ಕೊರತೆಯೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಯಿತು. ಜತೆಗೆ ನನ್ನ ಆಸಕ್ತಿಯ ಕ್ಷೇತ್ರವೂ ಇದೇ ಆಗಿದ್ದು, ಇದೇ ಕಾರಣದಿಂದ ಆಸಕ್ತಿಯಿಂದ ಕಲಿಯಲು ಮತ್ತು ಕಲಿಸಲು ಪ್ರಾರಂಭ ಮಾಡಿದೆ ಎನ್ನುತ್ತಾರೆ. ಇದಲ್ಲದೆ ತರಬೇತಿ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಕೂಡಾ ಮಹಮ್ಮದ್ ಹಸನ್ ಅಲಿಯ ಬೋಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.