ಕಾಸರಗೋಡು, ಅ 12: ಬಾಲಕನೋರ್ವ ಮೊಬೈಲ್ ಟವರ್ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ಸಮೀಪದ ವಿದ್ಯಾಗಿರಿಯಲ್ಲಿ ನಡೆದಿದೆ.
ವಿದ್ಯಾಗಿರಿ ಬಾಪುಮೂಲೆಯ ಸೀತಾರಾಮ ಎಂಬುವವರ ಪುತ್ರ ಮನೋಜ್ (16) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತನ ತಾಯಿ ಲೀಲಾವತಿ ಎಂಡೋಸಲ್ಫಾನ್ ಸಂತ್ರಸ್ತೆಯಾಗಿದ್ದು ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ತಾಯಿಯ ಸ್ಥಿತಿ ನೋಡಲಾಗದೆ ಖಿನ್ನತೆಯಿಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಬುಧವಾರ ರಾತ್ರಿ ಊಟ ಮಾಡಿ ಮನೆಯಿಂದ ಹೊರ ತೆರಳಿದ್ದ ಮನೋಜ್ ತಡರಾತ್ರಿಯಾದರೂ ಮನೆಗೆ ಮರಳಿರಲಿಲ್ಲ. ಹೀಗಾಗಿ ಮನೆಯವರು ಹುಡುಕಾಟ ನಡೆಸಿದ್ದು, ಮನೆಯ ಅಲ್ಪ ದೂರದಲ್ಲಿರುವ ಮೊಬೈಲ್ ಟವರ್ನ ಕೆಳಗಡೆ ರಕ್ತದ ಮಡುವಿನಲ್ಲಿ ಬಾಲಕ ಬಿದ್ದಿರುವುದು ಕಂಡುಬಂದಿದೆ. ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ತಂದೆ ಸೀತಾರಾಮ ಕೂಲಿ ಕಾರ್ಮಿಕನಾಗಿದ್ದು, ಇವರ ಆದಾಯದಿಂದಲೇ ಪತ್ನಿಯ ಚಿಕಿತ್ಸೆ, ಕುಟುಂಬದ ನಿತ್ಯವೆಚ್ಚಗಳನ್ನು ನಿಭಾಯಿಸಲಾಗುತ್ತಿತ್ತು. ತಾಯಿಯ ಅನಾರೋಗ್ಯದ ಬಗ್ಗೆ ಮನೋಜ್ ಸ್ನೇಹಿತರಲ್ಲಿ ಹೇಳಿಕೊಳ್ಳುತ್ತಿದ್ದ. ಹೀಗಾಗಿ ತಾಯಿಯ ಅನಾರೋಗ್ಯವೇ ಬಾಲಕನ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಬದಿಯಡ್ಕ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.