ವರದಿ: ಮಾನಸ
ಮಂಗಳೂರು, ನ 01: 'ಉಮಿಲ್' ತುಳು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ. ಆರಂಭದಿಂದಲೇ ಗುಂಯ್ ಗುಡುತ್ತಲೇ ಬಂದಿರುವ ಚಿತ್ರ ಪ್ರತಿ ಹಂತದಲ್ಲೂ ಸದ್ದು ಮಾಡುತ್ತಲೇ ಬಂದಿತ್ತು. ಬಿಗ್ ಬಜೆಟ್ ಸಿನಿಮಾ, ಕೋಸ್ಟಲ್ ವುಡ್'ನ ಮೊದಲ ಗ್ರಾಫಿಕ್ಸ್ ಚಿತ್ರ, ಕೆನಡಾದಲ್ಲಿ ತಾಂತ್ರಿಕ ಕೆಲಸ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕಂಠಸಿರಿ, ಪಿಆರ್ಕೆ ಕಂಪೆನಿ ಉಮಿಲ್ನ ಧ್ವನಿ ಸುರುಳಿ ಹಕ್ಕು ಖರೀದಿ, ಇಂಗ್ಲೀಷ್ ಆ್ಯಪ್ಗಳಲ್ಲೂ ತುಳು ಚಿತ್ರ ಉಮಿಲ್ ಹಾಡು ಪ್ರತಿಧ್ವನಿ- ಹೀಗೆ ಭರಪೂರ ಬ್ರೇಕಿಂಗ್ ಸುದ್ದಿಗಳನ್ನೇ ಉಮಿಲ್ ಹೊತ್ತು ತಂದಿತ್ತು.
ಅಂದ ಹಾಗೆ ಇಷ್ಟೆಲ್ಲಾ ಸುದ್ದಿ ಮಾಡುತ್ತಿರುವ ಉಮಿಲ್ ತನ್ನ ಸಿನಿಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದೆ. ಮೊದಲ ಗ್ರಾಫಿಕ್ಸ್ ತಂತ್ರಜ್ಞಾನದ ಚಿತ್ರ ಡಿಸೆಂಬರ್ 7 ರಂದು ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದೆ. ಇದರೊಂದಿಗೆ ದೊಡ್ಡ ಮೊತ್ತಕ್ಕೆ ಉಮಿಲ್ ಹಿಂದಿ ಡಬ್ಬಿಂಗ್ ರೈಟ್ಸ್ ಕೂಡಾ ಸೇಲ್ ಆಗಿದ್ದು ರಿಲೀಸ್ ಗೂ ಮುನ್ನಾ ಚಿತ್ರದ ಬಜೆಟ್ ನ ಶೇಕಡಾ 25 ರಷ್ಟು ಲಾಭ ಮಾಡಿದೆ ಎಂದು ಹೆಮ್ಮಪಡುತ್ತಾರೆ ಚಿತ್ರದ ನಿರ್ದೇಶಕ ರಂಜಿತ್ ಸುವರ್ಣ.
ಸಿನಿಮಾ ಜಗತ್ತಿನ ಸಿಹಿಕಹಿಗಳನ್ನು ಉಂಡ ರಂಜಿತ್ ಸುವರ್ಣ ಅವರು, 'ದೊಂಬರಾಟ' ಸಿನಿಮಾ ಬಳಿಕ ಎರಡನೇ ನಿರ್ದೇಶನದ ಚಿತ್ರವಾಗಿ 'ಉಮಿಲ್ ' ಕೈಗೆತ್ತಿಕೊಂಡರು. ಇದೀಗ 'ಯು/ಎ' ಸರ್ಟಿಫಿಕೇಟ್ ಪಡೆದ ಸಿನಿಮಾ ತೆರೆಮೇಲೆ 'ರಾವೊಂದು' ಬರಲು ಸಿದ್ದವಾಗಿ ನಿಂತಿದೆ.
ತುಳು ಹಾಗೂ ಕನ್ನಡದ ಸ್ಟಾರ್ ನಟರೇ ಉಮಿಲ್ ಚಿತ್ರದಲ್ಲಿ ಹಾಡಿರುವುದು ಮತ್ತೊಂದು ವಿಶೇಷ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ , ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ . ಚಿತ್ರದ ನಾಯಕ ನಟ ಉಮೇಶ್ ಮಿಜಾರ್(ಚೋಟು), ತುಳುನಾಡ ಚಕ್ರವರ್ತಿ ಅರ್ಜುನ್ ಕಾಪಿಕಾಡ್ ಅವರ ಕಂಠಸಿರಿ ಚಿತ್ರದಲ್ಲಿದೆ. ಭವಾನಿ ಫಿಲ್ಮ್ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಚಿತ್ರವನ್ನು ಕರುಣಾಕರ್ ಶೆಟ್ಟಿ ನಿರ್ಮಾಣ ಮಾಡಿದ್ದು, ಸಂಗೀತ ಹಿನ್ನಲೆಯನ್ನು ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರು ಒದಗಿಸಿದ್ದಾರೆ.