ಸುಳ್ಯ,ನ 01 (MSP): ತಾಲೂಕು ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಮತ್ತು ಚೈತ್ರ ಕುಂದಾಪುರ ತಂಡಗಳ ನಡುವೆ ಸುಬ್ರಹ್ಮಣ್ಯದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಆರೋಪಿ ಗುರುಪ್ರಸಾದ್ ಪಂಜರನ್ನು ಸುಬ್ರಹ್ಮಣ್ಯ ಪೊಲೀಸರು ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ಗುರುಪ್ರಸಾದ್ನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಪೊಲೀಸರು ಬಂಧಿಸಿದ್ದು, ಆತನಿಗೆ ಮಾರಣಾಂತಿಕ ಹಲ್ಲೆಯಾಗಿದ್ದು ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದೆ. ಆದ್ದರಿಂದ ಚಿಕಿತ್ಸೆಗೆ ಅನುಮತಿ ನೀಡಬೇಕು ಎಂದು ಗುರುಪ್ರಸಾದ್ ಪರ ವಕೀಲರು ಪರಿಪರಿಯಾಗಿ ಕೋರ್ಟಿಗೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ಕೋರ್ಟ್ ಚಿಕಿತ್ಸೆಯ ಅವಶ್ಯಕತೆ ಕಂಡು ಬಂದಲ್ಲಿ ನೀಡಬೇಕು ಎಂದು ಜೈಲಾಧಿಕಾರಿಗಳಿಗೆ ಆದೇಶಿಸಿದೆ.
ಸುಬ್ರಹ್ಮಣ್ಯ ಮಠದ ಆವರಣದಲ್ಲಿ ನಡೆದಿದ್ದ ಸುಧರ್ಮ ಸಭೆಯಲ್ಲಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಸಲಾಗುವ ಸರ್ಪಸಂಸ್ಕಾರ ಸೇವೆಯ ಬಗ್ಗೆ ಚೈತ್ರಾ ಕುಂದಾಪುರ ಸಂಸ್ಕಾರ ರಹಿತವಾಗಿ ಮಾತನಾಡಿದ್ದಾಳೆ ಎಂದು ಆರೋಪಿಸಿ ಗುರುಪ್ರಸಾದ್ ಪಂಜ ಮತ್ತು ಚೈತ್ರ ಕುಂದಾಪುರ ಮಧ್ಯೆ ಪೇಸ್ಬುಕ್ನಲ್ಲಿ ಚರ್ಚೆಗಳಾಗಿ ಚೈತ್ರಾ ಕುಂದಾಪುರ ಮತ್ತು ಗುರುಪ್ರಸಾದ್ ಪಂಜ ತಂಡಗಳ ನಡುವೆ ಅ.24ರಂದು ಸುಬ್ರಹ್ಮಣ್ಯದಲ್ಲಿ ಮಾರಾಮಾರಿ ನಡೆದಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚೈತ್ರ ಕುಂದಾಪುರ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ಗುರುಪ್ರಸಾದ್ ಪಂಜ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬುಧವಾರ ಸುಬ್ರಹ್ಮಣ್ಯ ಎಸ್.ಐ ಗೋಪಾಲ ನೇತೃತ್ವದ ಪೊಲೀಸರ ತಂಡ ಆಸ್ಪತ್ರೆಯಿಂದ ಆತನನ್ನು ಬಿಡುಗಡೆಗೊಳಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯದಲ್ಲಿ ಆರೋಪಿ ಗುರುಪ್ರಸಾದ್ನನ್ನು ವಿಚಾರಣೆ ನಡೆಸಿದ್ದು ನ.13ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಈ ಮಧ್ಯೆ ಗುರುಪ್ರಸಾದ್ಗೆ ನಿರೀಕ್ಷಣಾ ಜಾಮಿನಿಗಾಗಿ ಅರ್ಜಿ ಸಲ್ಲಿಸಿದ್ದು ಅರ್ಜಿಯ ವಿಚಾರಣೆ ಅ.2ರಂದು ನಡೆಯಲಿದೆ.ಚೈತ್ರ ಕುಂದಾಪುರಳ ಅರ್ಜಿ ವಿಚಾರಣೆ ಪುತ್ತೂರು ನ್ಯಾಯಾಲಯದಲ್ಲಿ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.