ಕಾರವಾರ, ನ 01 (MSP): ಕಾರವಾರ- ಗೋವಾ ಗಡಿಭಾಗದ ಅರಬ್ಭಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೆಲಿಕ್ಯಾಪ್ಟರ್ ಮೂಲಕ ಬಂದು ಮೀನುಗಾರರಿಂದ ಪುಕ್ಸಟೆಯಾಗಿ ಮೀನು ಪಡೆದುಕೊಂಡು ಹೋಗುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಕರ್ನಾಟಕ ಹಾಗೂ ಗೋವಾ ಗಡಿ ಭಾಗದಲ್ಲಿ ಸಮುದ್ರದಲ್ಲಿ ನಡೆದಿದೆ ಎನ್ನಲಾಗಿದೆ. ಮೀನುಗಾರಿಕಾ ಬೋಟ್ ಮಲ್ಪೆ ಬಂದರಿನದ್ದೆಂದು ತಿಳಿದು ಬಂದಿದೆ. ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಬಂದು ಗೋವದಲ್ಲಿ ಮೀನುಗಾರಿಕೆ ಮುಗಿಸಿ ವಾಪಸ್ ಆಗುತ್ತಿದ್ದ ಮೀನುಗಾರರ ಬಳಿ ಮೀನು ಬೇಕಾಗಿರುವ ಬಗ್ಗೆ ಕೇಳಿದ್ದು, ಬಳಿಕ ಹೆಲಿಕಾಪ್ಟರ್ ಮೇಲಿಂದಲೇ ಹಗ್ಗದ ಮೂಲಕ ಕವರ್ ಬಿಟ್ಟು ಬೋಟ್ನವರಿಂದ ಮೀನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಬಳಿಕ ಅಲ್ಲಿಂದ ಹೆಲಿಕಾಪ್ಟರ್ ತೆರಳುತ್ತಿರುವುದು ವಿಡಿಯೋದಲ್ಲಿದೆ. ಇದನ್ನು ಇನ್ನೊಂದು ಬೋಟ್ನಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಎರಡು ಮೂರು ದಿನದ ಹಿಂದೆ ಘಟನೆ ನಡೆದಿದ್ದು, ವಿಡಿಯೋ ಮಾಡುವವರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಿರುವುದರಿಂದ ಇದು ಕಾರವಾರ-ಗೋವಾ ಗಡಿ ಭಾಗದಲ್ಲಿ ನಡೆದಿದೆ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ.