ಕಾಸರಗೋಡು, ಸೆ 2 (DaijiworldNews/MS): ಬಾಡಿಗೆ ಮನೆ ಮಾಡಿ ಅಲ್ಲಿಂದ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಞಂಗಾಡ್ ಅರಂಗಾಡಿಯ ಶಮೀರ್ (30) ಮತ್ತು ಪಾಣತ್ತೂರು ಕಾರಟ್ ವಯಲಿನ ಎಂ . ಎ ಆರಿಫ್ ( 24) ಎಂದು ಗುರುತಿಸಲಾಗಿದೆ. ಎಂ. ಡಿ. ಎಂ. ಎ ಮಾದಕ ವಸ್ತು ಸಹಿತ ಇವರನ್ನು ಬಂಧಿಸಲಾಗಿದೆ.
ಮುಟ್ಟತ್ತೋಡಿ ಹಿದಾಯತ್ ನಗರದ ಬಾಡಿಗೆ ಮನೆಯೊಂದನ್ನು ಕೇಂದ್ರೀಕರಿಸಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು. ಎರಡು ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶಮೀರ್’ನ ಸಹೋದರ ಶಫೀಕ್ ಬಾಡಿಗೆಗೆ ಮನೆ ಪಡೆದಿದ್ದನು. ರಾತ್ರಿ ಸಮಯಗಳಲ್ಲಿ ಕಾರು ಮತ್ತು ಬೈಕ್ ಗಳಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಯಿತು. ಬಾಡಿಗೆ ಮನೆಯಲ್ಲಿ ಇದ್ದ 20. 75 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.